ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಕವನ: ಕ್ಷಮೆ ಯಾಚಿಸಿದ ಯುಎಇಯಲ್ಲಿರುವ ಕೇರಳದ ಉದ್ಯಮಿ

Update: 2020-04-19 18:15 GMT
Photo: facebook.com/SohanRoy

ಶಾರ್ಜಾ: ಕೊರೋನ ವೈರಸ್ ಹೆಸರಲ್ಲಿ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ರೀತಿಯ ಕವನ ಪೋಸ್ಟ್ ಮಾಡಿದ್ದಕ್ಕಾಗಿ ಯುಎಇಯಲ್ಲಿರುವ ಕೇರಳದ ಪ್ರಸಿದ್ಧ ಉದ್ಯಮಿಯೊಬ್ಬರು ಕ್ಷಮೆ ಯಾಚಿಸಿದ್ದಾರೆ.

ಶಾರ್ಜಾದಲ್ಲಿರುವ ಏರೀಸ್ ಗ್ರೂಪ್ ನ ಸಿಇಒ ಸೋಹನ್ ರಾಯ್ ಇಸ್ಲಾಮೋಫೋಬಿಯಾ ಹರಡಲು ಕೊರೋನವೈರಸನ್ನು ಬಳಸಿಕೊಂಡಿದ್ದಾರೆ ಎಂದು ಭಾರೀ ಆಕ್ರೋಶ ವ್ಯಕ್ತವಾದ ನಂತರ ಫೇಸ್ ಬುಕ್ ಲೈವ್ ನಲ್ಲಿ ಕ್ಷಮೆ ಯಾಚಿಸಿದ್ದಾರೆ.

ಮಲಯಾಳಂ ಭಾಷೆಯಲ್ಲಿ ‘ಮೂರ್ಖನ ಜೀವನ’ ಎನ್ನುವ ಕವನವನ್ನು ಅವರು ವಾಚಿಸಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಮತ್ತು ಇಸ್ಲಾಮೋಫೋಬಿಯಾವನ್ನು ಹರಡಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿತ್ತು.

ಈ ಕವನದಲ್ಲಿ ಯಾವುದೇ ಸಮುದಾಯದ ಹೆಸರನ್ನು ಬಳಸಿಲ್ಲವಾದರೂ, ಕವನ ವಾಚಿಸುವ ವ್ಯಕ್ತಿಯ ಹಿಂದೆ ಪ್ರಸಾರವಾಗುತ್ತಿದ್ದ ಚಿತ್ರಣದಲ್ಲಿ ಮುಸ್ಲಿಂ ಧಾರ್ಮಿಕ ನಾಯಕನೊಬ್ಬ ಕಣ್ಣುಕಟ್ಟಿದ ಜನರ ಮುಂದೆ ಇರುವುದಾಗಿ ತೋರಿಸಲಾಗಿತ್ತು.  ಈ ಕುರಿತು ಭಾರೀ ಆಕ್ರೋಶ ವ್ಯಕ್ತವಾದ ನಂತರ ಸೋಹನ್ ರಾಯ್ ಕ್ಷಮೆ ಯಾಚಿಸಿದ್ದಾರೆ.

“ಇದರ ಹಿಂದೆ ಯಾವುದೇ ದುರುದ್ದೇಶಗಳಿರಲಿಲ್ಲ. ಇದೊಂದು ಪ್ರಾಮಾಣಿಕ ತಪ್ಪು. ಏನು ನಡೆದಿದೆಯೋ ಅದೆಲ್ಲದರ ಜವಾಬ್ದಾರಿ ನನ್ನದು. ನಾನು ಯಾರದ್ದಾದರೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಲ್ಲಿ ಕ್ಷಮೆ ಯಾಚಿಸುತ್ತಿದ್ದೇನೆ. ಯಾವುದೇ ವಿವಾದಗಳಲ್ಲಿ ಬೀಳುವುದನ್ನು ನಾನು ಬಯಸುತ್ತಿಲ್ಲ. ಜನರಿಗೆ ನೋವಾಗಿದೆ ಎಂದು ತಿಳಿದ ತಕ್ಷಣ ನಾನು ಫೇಸ್ಬುಕ್ ಲೈವ್ ನಲ್ಲಿ ಕ್ಷಮೆ ಯಾಚಿಸಿದ್ದೇನೆ” ಎಂದು ರಾಯ್ ಹೇಳಿದ್ದಾಗಿ gulfnews.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News