ತಾರತಮ್ಯ ನಮ್ಮ ಮೌಲ್ಯವಲ್ಲ: ಯುಎಇಗೆ ತಿಳಿಸಿದ ಭಾರತೀಯ ರಾಯಭಾರಿ
ದುಬೈ, ಎ. 20: ಭಾರತ ಮತ್ತು ಯುಎಇ ತಾರತಮ್ಯರಹಿತ ಮೌಲ್ಯಗಳನ್ನು ಯಾವಾಗಲೂ ಅನುಸರಿಸುತ್ತವೆ ಎಂದು ಯುಎಇಗೆ ಭಾರತೀಯ ರಾಯಭಾರಿ ಪವನ್ ಕಪೂರ್ ಸೋಮವಾರ ಹೇಳಿದ್ದಾರೆ.
ಕೊರೋನವೈರಸ್ ಸಾಂಕ್ರಾಮಿಕದ ವಿಷಯದಲ್ಲಿ ಭಾರತದಲ್ಲಿ ಮುಸ್ಲಿಮರನ್ನು ಬಲಿಪಶು ಮಾಡಲಾಗುತ್ತದೆ ಎಂಬ ವರದಿಗಳ ಬಗ್ಗೆ ಅರಬ್ ಜಗತ್ತಿನಲ್ಲಿ ಹೆಚ್ಚುತ್ತಿರುವ ಅಸಹನೆಯ ಹಿನ್ನೆಲೆಯಲ್ಲಿ ಅವರು ಈ ಟ್ವೀಟ್ ಮಾಡಿದ್ದಾರೆ.
‘‘ಯಾವುದೇ ವಿಷಯದಲ್ಲಿ ತಾರತಮ್ಯ ಮಾಡದಿರುವ ಮೌಲ್ಯಗಳನ್ನು ಭಾರತ ಮತ್ತು ಯುಎಇ ಅನುಸರಿಸಿಕೊಂಡು ಬರುತ್ತಿವೆ. ತಾರತಮ್ಯವು ನಮ್ಮ ನೈತಿಕ ಚೌಕಟ್ಟು ಮತ್ತು ಕಾನೂನಿನ ಆಡಳಿತಕ್ಕೆ ವಿರುದ್ಧವಾಗಿದೆ. ಯುಎಇಯಲ್ಲಿರುವ ಭಾರತೀಯರು ಇದನ್ನು ಯಾವಾಗಲೂ ನೆನಪಿನಲ್ಲಿಡಬೇಕು’’ ಎಂದು ಪವನ್ ಕಪೂರ್ ಹೇಳಿದ್ದಾರೆ.
ಕ್ಷಮೆ ಕೋರಿದ ಯುಎಇಯ ಕೇರಳ ಉದ್ಯಮಿ
ತನ್ನ ‘ಕವನ’ದ ಮೂಲಕ ‘‘ಉದ್ದೇಶವಿಲ್ಲದೆ ಧಾರ್ಮಿಕ ಭಾವನೆಗಳನ್ನು ನೋಯಿಸಿರುವುದಕ್ಕಾಗಿ’’ ಯುಎಇಯಲ್ಲಿರುವ ಕೇರಳದ ಉದ್ಯಮಿಯೊಬ್ಬರು ಕ್ಷಮೆ ಕೋರಿದ್ದಾರೆ ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ. ಶನಿವಾರ ಫೇಸ್‌ಬುಕ್ ಲೈವ್ ವೀಡಿಯೊದಲ್ಲಿ ಅವರು ಕ್ಷಮೆ ಕೋರಿದ್ದಾರೆ ಎಂದು ಪತ್ರಿಕೆ ಹೇಳಿದೆ.