‘ಏನಾಗಿದೆ ಭಾರತಕ್ಕೆ?, ನಮಗೆ ಬೇಕಿರುವುದು ಹಿಟ್ಲರ್ ಅಲ್ಲ, ಗಾಂಧಿ’

Update: 2020-04-23 16:21 GMT

ಹೊಸದಿಲ್ಲಿ, ಎ.23: “ಮಹಾತ್ಮಾ ಗಾಂಧಿ ಮತ್ತು ನೆಲ್ಸನ್ ಮಂಡೇಲಾರಂತಹವರು ಇಂತಹ ಸಮಯಗಳಲ್ಲಿ ನಾವು ಅನುಸರಿಸಬೇಕಾದ ಆದರ್ಶ ವ್ಯಕ್ತಿಗಳಾಗಿದ್ದಾರೆ” ಎಂದು ಸಂಯುಕ್ತ ಅರಬ್ ಸಂಸ್ಥಾನ (ಯುಎಇ)ದ ರಾಜಮನೆತನದ ಸದಸ್ಯೆಯಾಗಿರುವ ರಾಜಕುಮಾರಿ ಹಿಂದ್ ಫೈಸಲ್ ಅಲ್ ಕಾಸಿಮಿ ಅವರು ಹೇಳಿದ್ದಾರೆ.

ಇಸ್ಲಾಮ್ ಬಗ್ಗೆ ಭೀತಿ, ದ್ವೇಷ ಮತ್ತು ಪೂರ್ವಗ್ರಹ (ಇಸ್ಲಾಮೋಫೋಬಿಯಾ)ದ ಸರಣಿ ಟ್ವೀಟ್‌ಗಳನ್ನು ಮಾಡಿದ್ದ ಯುಎಇ ನಿವಾಸಿಯಾಗಿರುವ ಭಾರತೀಯ ಸೌರಭ್ ಉಪಾಧ್ಯಾಯ ಎಂಬ ವ್ಯಕ್ತಿಯನ್ನು ಖಂಡಿಸಿದವರಲ್ಲಿ ಕಾಸಿಮಿ ಮೊದಲಿಗರಾಗಿದ್ದು, ಇದು ದೇಶದಲ್ಲಿಯ ಇತರರೂ ಅದರ ವಿರುದ್ಧ ಮಾತನಾಡುವಂತೆ ಮಾಡಿತ್ತು.

 “ಇದು ಆಕ್ರಮಣಕಾರಿಯಾದರೆ ಗೆಲ್ಲುವವರು ಯಾರೂ ಇಲ್ಲ. ನಾವು ನೆಲ್ಸನ್ ಮಂಡೇಲಾ-ಮಾರ್ಟಿನ್ ಲೂಥರ್-ಮಹಾತ್ಮಾ ಗಾಂಧಿಯವರ ಆದರ್ಶಗಳನ್ನು ನಮ್ಮ ನಡೆಗಳಲ್ಲಿ ಅನುಸರಿಸಬೇಕು. ನಮಗೆ ಇನ್ನೋರ್ವ ಹಿಟ್ಲರ್‌ನ ಅಗತ್ಯವಿಲ್ಲ, ನಮಗೆ ಹೊಸ ಗಾಂಧಿಯ ಅಗತ್ಯವಿದೆ” ಎಂದು The Telegraph ಆನ್‌ಲೈನ್‌ಗೆ ನೀಡಿರುವ ಸಂದರ್ಶನದಲ್ಲಿ ಕಾಸಿಮಿ ಹೇಳಿದ್ದಾರೆ. ಯುಎಇಯಲ್ಲಿ ದ್ವೇಷ ಭಾಷಣವು ದಂಡನೀಯ ಅಪರಾಧವಾಗಿದೆ ಎಂದಿದ್ದಾರೆ.

 ಅರಬ್ ಸಾಮಾಜಿಕ ಹೋರಾಟಗಾರರು ಮತ್ತು ಬುದ್ಧಿಜೀವಿಗಳಿಂದ ಬೆಂಬಲದ ಮಹಾಪೂರವೇ ಹರಿದು ಬರುವಂತೆ ಮಾಡಿದ್ದ ತನ್ನ ಎ.15ರ ಟ್ವೀಟ್‌ನ ಹಿಂದಿನ ಕಾರಣವನ್ನು ವಿವರಿಸಿರುವ ಅವರು,  “ಭಾರತೀಯನೋರ್ವ ನನ್ನ ಧರ್ಮ, ನನ್ನ ಪ್ರವಾದಿ, ನನ್ನ ದೇಶ ಮತ್ತು ಅದರ ಸಾಧನೆಗಳನ್ನು ಗೇಲಿ ಮಾಡಿದ್ದನ್ನು ಮತ್ತು ನಮ್ಮ ದೇಶಕ್ಕೆ ಬೆದರಿಕೆಯೊಡ್ಡಿದ್ದನ್ನು ನಾನು ಗಮನಿಸಿದ್ದೆ. ನಾನು ಆಘಾತಗೊಂಡಿದ್ದೆ ಮತ್ತು ನನ್ನನ್ನು ಅತಿಕ್ರಮಿಸಲಾಗಿದೆ ಎಂಬ ಭಾವನೆಯುಂಟಾಗಿತ್ತು” ಎಂದು ಹೇಳಿದ್ದಾರೆ.

ಭಾರತದಲ್ಲಿ ಕೊರೋನ ವೈರಸ್ ಹರಡುವಿಕೆಗೆ ಕಾರಣವಾಗಿರುವ ತಬ್ಲೀಗಿ ಜಮಾಅತ್‌ನ್ನು ತಾನು ಸಮರ್ಥಿಸಿಕೊಂಡಿದ್ದೇನೆ ಎಂದು ಆರೋಪಿಸಿ ಬಹಳಷ್ಟು ಭಾರತೀಯರು ತನ್ನ ವಿರುದ್ಧ ದಾಳಿ ನಡೆಸಿದ್ದರು ಎಂದು ಸಂದರ್ಶನದಲ್ಲಿ ಹೇಳಿರುವ ಕಾಸಿಮಿ, “ಪ್ರಾಮಾಣಿಕವಾಗಿ ಹೇಳಬೇಕೆಂದರೆ ತಬ್ಲೀಗಿ ಜಮಾಅತ್ ಬಗ್ಗೆ ತಾನೆಂದೂ ಕೇಳಿಯೇ ಇರಲಿಲ್ಲ. ತಾನು ಭಾರತದಲ್ಲಿಯ ರಾಜಕೀಯ ಗುಂಪನ್ನು ಸಮರ್ಥಿಸುತ್ತಿಲ್ಲ, ತಾನು ಕೊಲ್ಲಲ್ಪಡುತ್ತಿರುವ ಮನುಷ್ಯರನ್ನು ಸಮರ್ಥಿಸಿಕೊಳ್ಳುತ್ತಿದ್ದೇನೆ” ಎಂದಿದ್ದಾರೆ.

“ಏನಾಗಿದೆ ಭಾರತಕ್ಕೆ” ಎಂದು ಪ್ರಶ್ನಿಸುವ ಮೂಲಕ ಇದು ತನಗೆ ಗೊತ್ತಿದ್ದ ಭಾರತವಲ್ಲ ಎಂದು ಬೆಟ್ಟು ಮಾಡಿರುವ ಅವರು, “ಹಿಂದು ಧರ್ಮವು ಅತ್ಯಂತ ಶಾಂತಿಯುತ ಧರ್ಮಗಳಲ್ಲೊಂದಾಗಿದೆ, ಬಹುಶಃ ಇಸ್ಲಾಂ, ಕ್ರಿಶ್ಚಿಯನ್ ಮತ್ತು ಯಹೂದಿಗಿಂತ ಹೆಚ್ಚು”
ಎಂದಿದ್ದಾರೆ. ಭಾರತೀಯ ಚಿತ್ರಗಳನ್ನು ನೋಡುತ್ತ ತಾನು ಬೆಳೆದಿದ್ದನ್ನು,ಅಲ್ಪಸ್ವಲ್ಪ ಹಿಂದಿ ಕಲಿತಿದ್ದನ್ನು ನೆನಪಿಸಿಕೊಂಡ ಕಾಸಿಮಿ, ಹಿಂದಿ ಭಾಷಿಕ ಸಹಪಾಠಿಗಳು, ಸಹೋದ್ಯೋಗಿಗಳು, ಕೆಲಸಗಾರರು ಮತ್ತು ಮ್ಯಾನೇಜರ್‌ಗಳೊಂದಿಗೆ ತಾನು ಒಡನಾಡಿದ್ದೇನೆ ಮತ್ತು ತನ್ನ ಮೊದಲ ಹೆಸರನ್ನೂ ‘ಭಾರತ (ಹಿಂದ್)’ಎಂದು ಹೊಂದಿದ್ದೇನೆ ಎಂದಿದ್ದಾರೆ.

ಉಪಾಧ್ಯಾಯ ಮಾಡಿದ್ದ ಸರಣಿ ಟ್ವೀಟ್‌ಗಳಲ್ಲೊಂದಕ್ಕೆ ಉತ್ತರಿಸಿದ್ದ ಕಾಸಿಮಿ,ತಾನು ಹಿಂದುಗಳ ಮನೆಯಲ್ಲಿ ಬೆಳೆದಿದ್ದೆ,ಅವರು ತನ್ನ ಕುಟುಂಬವಾಗಿದ್ದರು ಎಂದು ತಿಳಿಸಿದ್ದರು.

ಯುಎಇಯಲ್ಲಿ ದ್ವೇಷಕ್ಕೆ ಸ್ಥಾನವಿಲ್ಲ ಎನ್ನುವುದನ್ನು ನಿದರ್ಶನವಾಗಿಸಲು ಅವರು ಉಪಾಧ್ಯಾಯ ವಿರುದ್ಧ ಸ್ಥಳೀಯ ಅಧಿಕಾರಿಗಳಿಗೆ ವರದಿಯನ್ನೂ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News