‘ಗಲ್ಫ್ ನ್ಯೂಸ್’ ವರದಿಗಾರ, ಪುತ್ರಿಯರಿಗೆ ಬಿಜೆಪಿ ಐಟಿ ಸೆಲ್ ನಿಂದ ಬೆದರಿಕೆ: ಆರೋಪ

Update: 2020-04-25 15:12 GMT

ದುಬೈ, ಎ. 25: ಯುಎಇ ಮತ್ತು ಕೊಲ್ಲಿ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕುತ್ತಿರುವ ಇಸ್ಲಾಮಿಕ್ ವಿರೋಧಿ ಸಂದೇಶಗಳನ್ನು ಬಯಲಿಗೆಳೆದಿರುವ ದುಬೈಯ ‘ಗಲ್ಫ್ ನ್ಯೂಸ್’ ಪತ್ರಿಕೆಯ ತನಿಖಾ ವರದಿಗಾರ ಮಝರ್ ಫಾರೂಖಿ, ಬಲಪಂಥೀಯ ಐಟಿ ಸೆಲ್ ಟ್ರೋಲ್ ಗಳಿಂದ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಅವರ ತನಿಖಾ ವರದಿಗಳಿಂದಾಗಿ ಇಸ್ಲಾಮ್ ವಿರೋಧಿ ಬರಹಗಳನ್ನು ಹಾಕಿರುವ ಹಲವರನ್ನು ಕಂಪೆನಿಗಳು ಕೆಲಸದಿಂದ ವಜಾಗೊಳಿಸಿವೆ ಹಾಗೂ ಹಲವು ಪ್ರಕರಣಗಳಲ್ಲಿ ಅವರ ಬಂಧನಗಳೂ ನಡೆದಿವೆ.

 “ನನ್ನ ಮೇಲ್, ವಾಟ್ಸ್‌ಆ್ಯಪ್, ಫೇಸ್‌ಬುಕ್ ಮೆಸೆಂಜರ್ ಮತ್ತು ಟ್ವಿಟರ್ ಖಾತೆಗಳಿಗೆ ಬೈಗುಳದ ಮತ್ತು ಬೆದರಿಕೆಯ ಸಂದೇಶಗಳು ಪ್ರವಾಹದಂತೆ ಹರಿದು ಬರುತ್ತಿವೆ” ಎಂದು ಫಾರೂಖಿ ಹೇಳುತ್ತಾರೆ. ಕೆಲವು ಬೆದರಿಕೆಗಳು ಖಚಿತಪಡಿಸಿದ ಖಾತೆಗಳಿಂದ ಹಾಗೂ ಪ್ರಧಾನಿ ನರೇಂದ್ರ ಮೋದಿ ಫಾಲೋ ಮಾಡುತ್ತಿರುವ ಜನರಿಂದ ಬರುತ್ತಿವೆ ಎಂದು ಅವರು ಹೇಳುತ್ತಾರೆ.

 ಈ ಪೈಕಿ ಹೆಚ್ಚಿನ ಬೆದರಿಕೆಗಳು ಕೆಟ್ಟ ಭಾಷೆಗಳನ್ನು ಒಳಗೊಂಡಿವೆ ಹಾಗೂ ಕೆಲವು ಸಂದೇಶಗಳು ಫಾರೂಖಿಯ ಪುತ್ರಿಯರಿಗೂ ಬೆದರಿಕೆ ಹಾಕಿವೆ.

 ‘ಮೋದಿ ಫಾಲೋ ಮಾಡುತ್ತಿರುವ ಜನರಿಂದ ನಿಂದನೆ, ಬೆದರಿಕೆ’:ಆರೋಪ

 ‘‘ಇದೊಂದು ಸಾಂಕ್ರಾಮಿಕವಿದ್ದಂತೆ. ಇಮೇಲ್, ಎಫ್‌ಬಿ ಮೆಸೆಂಜರ್, ಇನ್‌ಸ್ಟಾಗ್ರಾಮ್, ವಾಟ್ಸ್‌ಆ್ಯಪ್‌ಗಳಲ್ಲಿ ನೂರಾರು ಜನರಿಂದ ನನಗೆ ಸುಮಾರು 5,000 ಸಂದೇಶಗಳು ಬಂದಿವೆ. ಆದರೆ, ಬಳಿಕ ಕಾನೂನು ಕ್ರಮಕ್ಕೆ ಹೆದರಿ ಹೆಚ್ಚಿನವರು ತಮ್ಮ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ ಅಥವಾ ತಮ್ಮ ಸಂದೇಶಗಳನ್ನು ಡಿಲೀಟ್ ಮಾಡಿದ್ದಾರೆ’’ ಎಂದು ಫಾರೂಖಿಯನ್ನು ಉಲ್ಲೇಖಿಸಿ ‘ನ್ಯಾಶನಲ್ ಹೆರಾಲ್ಡ್’ ವರದಿ ಮಾಡಿದೆ.

‘‘ಇದೆಲ್ಲದರ ನಡುವೆಯೇ, ಬಿಜೆಪಿಯ ಮಾಹಿತಿ ತಂತ್ರಜ್ಞಾನ ಘಟಕವು ನನ್ನ ವಿರುದ್ಧ ಟ್ವಿಟರ್‌ ನಲ್ಲಿ ಆಕ್ರಮಣಕಾರಿ ಅಪಪ್ರಚಾರ ಅಭಿಯಾನವನ್ನು ನಡೆಸುತ್ತಿದೆ. ನೈಜ ಖಾತೆಗಳನ್ನು ಹೊಂದಿರುವ ಜನರು ನನ್ನನ್ನು ನಿಂದಿಸುತ್ತಿದ್ದಾರೆ ಹಾಗೂ ನನ್ನ ಪಾಸ್‌ಪೋರ್ಟನ್ನು ರದ್ದುಪಡಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನನಗೆ ಮತ್ತು ನನ್ನ ಪುತ್ರಿಯರಿಗೆ ಹಾನಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಈ ಪೈಕಿ ಕೆಲವರನ್ನು ಪ್ರಧಾನಿ ಮೋದಿ ಫಾಲೋ ಮಾಡುತ್ತಿದ್ದಾರೆ. ನನ್ನ ಪುತ್ರಿಯರ ಚಿತ್ರಗಳನ್ನೂ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದಾರೆ’’ ಎಂದು ಫಾರೂಖಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News