ದುಬೈ : ಬ್ಯಾರೀಸ್ ಕಲ್ಚರಲ್ ಫೋರಮ್ ವತಿಯಿಂದ ಅನಿವಾಸಿ ಕನ್ನಡಿಗರಿಗೆ ಆಹಾರ, ವೈದ್ಯಕೀಯ ಸಹಾಯ

Update: 2020-04-27 11:27 GMT

ದುಬೈ :  ಬ್ಯಾರೀಸ್ ಕಲ್ಚರಲ್ ಫೋರಮ್ (ಬಿಸಿಎಫ್) ವತಿಯಿಂದ ಕೊರೋನ ವೈರಸ್ ಭೀತಿಯಿಂದ ಸಂಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರಿಗೆ ಆಹಾರ, ವೈದ್ಯಕೀಯ ಸೇವೆಯನ್ನು ನೀಡಲಾಗುತ್ತಿದೆ.

ಬಿಸಿಎಫ್ ಅಧ್ಯಕ್ಷರಾದ ಡಾ. ಬಿಕೆ ಯೂಸುಫ್ ಅವರ ಮಾರ್ಗದರ್ಶನದಲ್ಲಿ ಇಲ್ಲಿನ ಜನ ಸಾಂದ್ರತೆಯ ಕಮರ್ಷಿಯಲ್ ಕೇಂದ್ರಗಳಾದ ದೇರಾ , ನೈಫ್, ಫ್ರೀಝ್, ಮುರಾರ್ ಮೊದಲಾದ ಪ್ರದೇಶಗಳನ್ನು ಕೇಂದ್ರವಾಗಿಟ್ಟುಕೊಂಡು ಸೇವೆ ನೀಡುತ್ತಿದ್ದಾರೆ.

ಯುಎಇಯಲ್ಲಿರುವ ಎಲ್ಲರಿಗೂ ಅಲ್ಲಿನ ಸರಕಾರ ಸಮಾನವಾದ ಮತ್ತು ಉತ್ತಮ ರೀತಿಯ ಸೇವೆ ನೀಡುತ್ತಿದ್ದು, ಅದಾಗ್ಯೂ ಹಲವಾರು ಸಂದರ್ಭಗಳಲ್ಲಿ ಸಂಪರ್ಕದ ಕೊರತೆಯಿಂದ ಸಹಾಯ ವಂಚಿತರಾದ ಹಲವು ಅನಿವಾಸಿ ಕನ್ನಡಿಗರಿಗೆ ಬಿಸಿಎಫ್ ಸಹಾಯ ನೀಡುತ್ತಿದೆ. ಕೊರೋನ ಸಂತ್ರಸ್ತರಿಗೆ ಅಗತ್ಯದ ಆಹಾರ, ಇತರ ಆರೋಗ್ಯದ ತೊಂದರೆಗಳಿರುವ ರೋಗಿಗಳಿಗೆ ಅಗತ್ಯವಾದ ಔಷಧಗಳನ್ನು ಬಿಸಿಎಫ್ ತಲುಪಿಸುತ್ತಿದೆ. ಕೊರೋನ ಪಾಸಿಟಿವ್ ಆದವರನ್ನು ಮತ್ತು ಅವರೊಂದಿಗೆ ಇರುವ ಶಂಕಿತ ಕೊರೊನ ಪೀಡಿತರನ್ನು ಕ್ವಾರಂಟೈನ್ ಗೊಳಿಸುವ ಕಾರ್ಯ ಮೊದಲಾದ ಸೇವೆಗಳನ್ನು ನೀಡಲು ದುಬೈ ಸರಕಾರದ ಅಂಗೀಕೃತ ಸಮಾಜಸೇವಾ ಸಂಸ್ಥೆಯಾಗಿ ನೇಮಕಗೊಂಡ ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್ (ಕೆಎಂಸಿಸಿ  ) ನೊಂದಿಗೆ ಬಿಸಿಎಫ್ ಸಹಕರಿಸುತ್ತಿದೆ.

ಯುಎಇಯಲ್ಲಿರುವ ಅನಿವಾಸಿ ಕನ್ನಡಿಗರು ತಾಯ್ನಾಡಿಗೆ ಮರಳಲು ಉತ್ಸಾಹಕರಾಗಿದ್ದು, ಈ ನಿಟ್ಟಿನಲ್ಲಿ ಭಾರತ ಕೇಂದ್ರ ಸರಕಾರ, ಕರ್ನಾಟಕ ರಾಜ್ಯ ಸರಕಾರ ಮತ್ತು ಯುಎಇ ಸರಕಾರದೊಂದಿಗೆ ಸಮಾಲೋಚಿಸಿ ಕಾರ್ಯ ಸೂಚಿಯನ್ನು ರೂಪಿಸಬೇಕೆಂದು ಬಿಸಿಎಫ್ ಒತ್ತಾಯಿಸಿದೆ.  ಯುಎಇ ಯಲ್ಲಿ ಸಂಕಷ್ಟದಲ್ಲಿರುವ ಕೊರೋನ ಸಂತ್ರಸ್ತರಿಗೆ ಇಲ್ಲಿನ ನಿಯಮಾನುಸಾರ ಒದಗಿಲ್ಪಡುವ ಸಹಾಯ ಸವಲತ್ತುಗಳು, ಕ್ವಾರಂಟೈನ್ ಸವಲತುಗಳು ತಲುಪುವಂತೆ ಯುಎಇ ಭಾರತೀಯ ದೂತಾವಾಸ,  ಸಂಬಂಧಪಟ್ಟ ಯುಎಇ ಸರಕಾರೀ ಇಲಾಖೆಯನ್ನು ಸಮಪರ್ಕಿಸಿ ಪ್ರಯತ್ನಿಸಬೇಕೆಂದು ಬಿಸಿಎಫ್ ಮನವಿ ಮಾಡಿದೆ. ಮತ್ತು ಇತರ ಕನ್ನಡ ಪರ ಸಂಘಟನೆಗಳೂ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿವೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News