ಕೇರಳದ ಉದ್ಯಮಿ ಜಾಯ್ ಅರಕ್ಕಲ್ ಸಾವು ಆತ್ಮಹತ್ಯೆ: ಖಚಿತಪಡಿಸಿದ ದುಬೈ ಪೊಲೀಸರು

Update: 2020-04-29 16:44 GMT

ದುಬೈ, ಎ. 29: ದುಬೈಯಲ್ಲಿ ಕಳೆದ ವಾರ ಸಂಭವಿಸಿದ ಭಾರತೀಯ ಉದ್ಯಮಿ ಜಾಯ್ ಅರಕ್ಕಲ್‌ರ ಸಾವು ಆತ್ಮಹತ್ಯೆ ಪ್ರಕರಣವಾಗಿದೆ ಎಂದು ದುಬೈ ಪೊಲೀಸರು ಖಚಿತಪಡಿಸಿದ್ದಾರೆ.

ಅವರು ಎಪ್ರಿಲ್ 23ರಂದು ಬಿಸ್ನೆಸ್ ಬೇಯಲ್ಲಿರುವ ಕಟ್ಟಡವೊಂದರ 14ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡರು ಎಂದು ಬುರ್ ದುಬೈ ಪೊಲೀಸ್ ಠಾಣೆಯ ನಿರ್ದೇಶಕ ಬ್ರಿಗೇಡಿಯರ್ ಅಬ್ದುಲ್ಲಾ ಖದೀಮ್ ತಿಳಿಸಿದರು.

‘‘ಅದು ಆತ್ಮಹತ್ಯೆಯಾಗಿತ್ತು. ತನಿಖೆಗಳು ಮುಗಿದಿವೆ. ಅವರ ದೇಹವನ್ನು ಭಾರತಕ್ಕೆ ಕಳುಹಿಸಲಾಗುವುದು’’ ಎಂದು ಅವರು ‘ಖಲೀಜ್ ಟೈಮ್ಸ್’ಗೆ ತಿಳಿಸಿದರು. ಯುಎಇಯ ‘ಗೋಲ್ಡ್ ಕಾರ್ಡ್’ ವೀಸಾ ಹೊಂದಿದ್ದ ಅವರು ಆರ್ಥಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕೇರಳ ನಿವಾಸಿಯಾಗಿರುವ 54 ವರ್ಷದ ಅರಕ್ಕಲ್ ದುಬೈಯ ಇನೋವ ರಿಫೈನಿಂಗ್ ಮತ್ತು ಟ್ರೇಡಿಂಗ್ ಎಫ್‌ಝಡ್‌ಇಯ ಮಾಲೀಕರಾಗಿದ್ದರು. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ವಿದೇಶಿ ಉದ್ಯಮಿಗಳಿಗೆ ಕೊಡುವ 10 ವರ್ಷಗಳ ಅವಧಿಯ ಗೋಲ್ಡ್ ಕಾರ್ಡ್ ವೀಸಾವನ್ನು ಯುಎಇ ಸರಕಾರವು ಅವರಿಗೆ 2019ರಲ್ಲಿ ನೀಡಿತ್ತು.

ವಿಶೇಷ ಆ್ಯರ್ ಆ್ಯಂಬುಲೆನ್ಸ್‌ನಲ್ಲಿ ಮೃತದೇಹ ಮನೆಗೆ

ಉದ್ಯಮಿ ಜಾಯ್ ಅರಕ್ಕಲ್‌ರ ಮೃತದೇಹವನ್ನು ವಿಶೇಷ ಆ್ಯಂಬುಲೆನ್ಸ್ ವಿಮಾನದಲ್ಲಿ ಭಾರತಕ್ಕೆ ಕಳುಹಿಸಲಾಗುವುದು ಹಾಗೂ ಇದಕ್ಕೆ ಭಾರತ ಸರಕಾರದ ಗೃಹ ಸಚಿವಾಲಯ ಅನುಮತಿ ನೀಡಿದೆ ಎಂದು ದುಬೈಯಲ್ಲಿರುವ ಭಾರತೀಯ ಕೌನ್ಸುಲ್ ಜನರಲ್ ವಿಪುಲ್ ಬುಧವಾರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News