ಸ್ವದೇಶಕ್ಕೆ ವಾಪಸಾಗಲು ಬಯಸುವವರ ಆನ್‍ಲೈನ್ ರಿಜಿಸ್ಟ್ರೇಶನ್ ಆರಂಭಿಸಿದ ಯುಎಇಯ ಭಾರತೀಯ ರಾಯಭಾರ ಕಚೇರಿ

Update: 2020-04-30 10:56 GMT

ದುಬೈ: ಕೋವಿಡ್-19 ಸೋಂಕು ವ್ಯಾಪಿಸುವುದನ್ನು ತಡೆಗಟ್ಟಲು ಸಂಯುಕ್ತ ಅರಬ್ ಸಂಸ್ಥಾನದಲ್ಲಿ ಹೇರಲಾಗಿರುವ ಲಾಕ್ ಡೌನ್‍ನಿಂದಾಗಿ ಅತಂತ್ರರಾಗಿರುವ ಹಾಗೂ ಸ್ವದೇಶಕ್ಕೆ ವಾಪಸಾಗಲು ಬಯಸುವ ಭಾರತೀಯ ವಲಸಿಗರಿಗೆ ಆನ್‍ಲೈನ್ ಮೂಲಕ ಹೆಸರು ನೋಂದಾಯಿಸುವ ಸೌಲಭ್ಯವನ್ನು ಅಲ್ಲಿನ ಭಾರತೀಯ ಹೈಕಮಿಷನ್ ಕಚೇರಿಗಳು ಒದಗಿಸಿವೆ. ಈ ಕುರಿತಂತೆ ಅಬುಧಾಬಿಯಲ್ಲಿರುವ ಭಾರತೀಯ ದೂತಾವಾಸವು ಬುಧವಾರ ರಾತ್ರಿ ಮಾಹಿತಿ ನೀಡಿದ್ದು ದುಬೈಯಲ್ಲಿನ ಭಾರತೀಯ ಕಾನ್ಸುಲೇಟ್ ವೆಬ್ ಸೈಟ್ ಮೂಲಕ ಹೆಸರು ನೋಂದಾಯಿಸಬಹುದಾಗಿದೆ.

ಈ ಉದ್ದೇಶದಿಂದ ಅಬುಧಾಬಿಯಲ್ಲಿನ ಭಾರತೀಯ ದೂತಾವಾಸ ಕಚೇರಿ ಹಾಗೂ ದುಬೈಯಲ್ಲಿನ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಡಾಟಾಬೇಸ್ ಆರಂಭಿಸಿದ್ದು ಈಗಿನ ಕೋವಿಡ್-19 ಸನ್ನಿವೇಶದಲ್ಲಿ ಭಾರತಕ್ಕೆ ವಾಪಸಾಗಲು ಇಚ್ಛಿಸುವವರು ನೋಂದಣಿ ಮಾಡಬೇಕು.  ಮಾಹಿತಿಗಳನ್ನು www.indianembassyuae.gov.in ಅಥವಾ  www.cgidubai.gov.in ವೆಬ್ ಸೈಟ್ ಗಳಲ್ಲಿ ಈ ಲಿಂಕ್- 'Register in Database of Indians to Travel Back to India under COVID-19 situation’ ಮೂಲಕ ನೋಂದಣಿ ಮಾಡಬಹುದಾಗಿದೆ ಎಂದು ಇಂಡಿಯಾ ಇನ್ ದುಬೈ ಟ್ವೀಟ್ ಮಾಡಿದೆ.

ಆದರೆ ಇದಾದ ಕೆಲವೇ ನಿಮಿಷಗಳಲ್ಲಿ ದೂತಾವಾಸ ಕಚೇರಿ ಲಿಂಕ್ ಅನ್ನು 'ತಾಂತ್ರಿಕ ಕಾರಣಗಳ' ನೆಪವೊಡ್ಡಿ ಡಿಲೀಟ್ ಮಾಡಿತ್ತು. ಜನರಿಗೆ ಆ ಲಿಂಕ್ ಮೂಲಕ ನೋಂದಣಿ ಮಾಡಲು ಕಷ್ಟವಾಗಿತ್ತು ಎಂಬ ಕಾರಣ ನೀಡಲಾಗಿತ್ತು.

ಆದರೆ ಗುರುವಾರ ಮತ್ತೆ ಈ ಲಿಂಕ್ ಪೋಸ್ಟ್ ಮಾಡಲಾಗಿದೆ. ಆದರೆ ಬಹಳಷ್ಟು ಜನರು ಬಳಸುತ್ತಿರುವುದರಿಂದ ಪೇಜ್ ಲೋಡ್ ಆಗಲು ಸಮಯ ತಗಲಬಹುದೆಂದೂ ಎಚ್ಚರಿಸಿದೆ.

ಈ ನೋಂದಣಿ ಕೇವಲ ಮಾಹಿತಿ ಸಂಗ್ರಹಕ್ಕಾಗಿ, ಇದನ್ನು ಬಳಸಿ ಭಾರತ ಸರಕಾರಕ್ಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗಲಿದೆ ಎನ್ನಲಾಗಿದೆ. ಏಕಕಾಲಕ್ಕೆ ಒಬ್ಬ ವ್ಯಕ್ತಿಯ ಹೆಸರು ಮಾತ್ರ ನೋಂದಾಯಿಸಬಹುದಾಗಿದ್ದು, ಕುಟುಂಬಗಳು ಪ್ರತಿ ಸದಸ್ಯರಿಗೆ ಪ್ರತ್ಯೇಕ ಫಾರ್ಮ್ ಭರಿಸಬೇಕಿದೆ. ಕಂಪೆನಿಗಳು ಪ್ರತಿ ಉದ್ಯೋಗಿಗೆ ಪ್ರತ್ಯೇಕ ಫಾರ್ಮ್ ಭರಿಸಬೇಕಿದೆ.

ಕೋವಿಡ್-19 ಪರಿಸ್ಥಿತಿಯನ್ನು ಅವಲೋಕಿಸಿ ವಿದೇಶಗಳಲ್ಲಿರುವ ಭಾರತೀಯರನ್ನು ವಾಪಸ್ ಕರೆತರುವ ನಿಟ್ಟಿನಲ್ಲಿ ಯೋಚಿಸಲಾಗುವುದು ಎಂದು ಎಪ್ರಿಲ್ 10ರಂದು ಸರಕಾರ ಹೇಳಿತ್ತು. ಸಂಯುಕ್ತ ಅರಬ್ ಸಂಸ್ಥಾನದಲ್ಲಿ ಅಂದಾಜು 34.2 ಲಕ್ಷ ಭಾರತೀಯರಿದ್ದು ದೇಶದ ಜನಸಂಖ್ಯೆಯಲ್ಲಿ ಶೇ. 30ರಷ್ಟು ಪಾಲು ಅವರದ್ದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News