ವಿದೇಶಿಯರನ್ನು ತೆಗೆದು ಸ್ಥಳೀಯರನ್ನು ನೇಮಿಸಿ: ಸರಕಾರಿ ಕಂಪೆನಿಗಳಿಗೆ ಒಮಾನ್ ಸೂಚನೆ

Update: 2020-04-30 16:31 GMT

ಮಸ್ಕತ್ (ಒಮಾನ್), ಎ. 30: ವಿದೇಶಿ ಉದ್ಯೋಗಿಗಳನ್ನು ತೆಗೆದು ಸ್ಥಳೀಯರನ್ನು ನೇಮಿಸಿಕೊಳ್ಳುವಂತೆ ಒಮಾನ್‌ನ ಹಣಕಾಸು ಸಚಿವಾಲಯ ಬುಧವಾರ ಸರಕಾರಿ ಕಂಪೆನಿಗಳಿಗೆ ಸೂಚಿಸಿದೆ. ರಾಷ್ಟ್ರೀಯ ಉದ್ಯೋಗಿ ಸಮೂಹವೊಂದನ್ನು ನಿರ್ಮಿಸುವ ಪ್ರಯತ್ನಗಳ ಭಾಗವಾಗಿ ಸರಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಸರಕಾರಿ ಒಡೆತನದ ಒಮಾನ್ ನ್ಯೂಸ್ ಏಜನ್ಸಿ ವರದಿ ಮಾಡಿದೆ.

ಸರಕಾರದ ಒಮಾನೀಕರಣ ನೀತಿಯ ಭಾಗವಾಗಿ ಈ ಬೆಳವಣಿಗೆ ನಡೆದಿದೆ. ಒಮಾನಿ ನಾಗರಿಕರಿಗೆ ಲಭ್ಯವಿರುವ ಉದ್ಯೋಗಗಳ ಸಂಖ್ಯೆ ಮತ್ತು ಗುಣಮಟ್ಟವನ್ನು ಸುಧಾರಿಸುವ ದೃಷ್ಟಿಯಿಂದ ಸರಕಾರ ಒಮಾನೀಕರಣಕ್ಕೆ ಕೈಹಾಕಿದೆ.

ಇಳಿಯುತ್ತಿರುವ ತೈಲ ದರ ಮತ್ತು ನೋವೆಲ್-ಕೊರೋನವೈರಸ್ ಹಿನ್ನೆಲೆಯಲ್ಲಿ ಉಂಟಾಗಿರುವ ಆರ್ಥಿಕ ಹಿಂಜರಿತವು ಒಮಾನ್ ದೇಶದ ಆರ್ಥಿಕತೆಯ ಮೇಲೆ ಹೊಡೆತ ನೀಡಿವೆ.

ಎರಡು ವಾರಗಳ ಹಿಂದೆ, ಕೊರೋನವೈರಸ್ ಹಿನ್ನೆಲೆಯಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ಸರಿದೂಗಿಸಲು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯದಂತೆ ಸರಕಾರವು ಖಾಸಗಿ ಕಂಪೆನಿಗಳಿಗೆ ಸೂಚನೆ ನೀಡಿತ್ತು. ಅದೇ ವೇಳೆ, ಶಾಶ್ವತವಾಗಿ ಕೆಲಸ ತೊರೆಯುವಂತೆ ಒಮಾನಿಯೇತರ ದೇಶಗಳ ನೌಕರರಿಗೆ ಹೇಳುವಂತೆಯೂ ಅದು ಒತ್ತಾಯಿಸಿತ್ತು.

ಇದು ಒಮಾನ್‌ನಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಅಲ್ಲಿನ 46 ಲಕ್ಷ ನಿವಾಸಿಗಳ ಪೈಕಿ ಮೂರನೇ ಒಂದಕ್ಕೂ ಹೆಚ್ಚು ಭಾಗ ವಿದೇಶೀಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News