ದುಬೈ: ವಂಚಕರಿಂದ ಭಾರತೀಯ ರಫ್ತುದಾರರಿಗೆ 8.17 ಕೋಟಿ ರೂ. ವಂಚನೆ

Update: 2020-04-30 17:19 GMT

ದುಬೈ, ಎ. 30: ದುಬೈಯಲ್ಲಿ ನಡೆದ ಭಾರಿ ವಂಚನಾ ಹಗರಣವೊಂದರಲ್ಲಿ, ಬಾಳೆಹಣ್ಣು, ಟೊಮ್ಯಾಟೋ, ದ್ರಾಕ್ಷಿ, ದಾಳಿಂಬೆ, ತೆಂಗಿನಕಾಯಿ ಮತ್ತು ಮೆಣಸನ್ನು ಭಾರೀ ಪ್ರಮಾಣದಲ್ಲಿ ಖರೀದಿಸಿರುವ ಕಂಪೆನಿಯೊಂದು, ಬಳಿಕ 4 ಮಿಲಿಯ ದಿರ್ಹಮ್ (ಸುಮಾರು 8.17 ಕೋಟಿ ರೂಪಾಯಿ)ಗೂ ಅಧಿಕ ಹಣವನ್ನು ರಫ್ತುದಾರರಿಗೆ ಪಾವತಿಸದೆ ವಂಚಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹಲವಾರು ಭಾರತೀಯ ರಫ್ತುದಾರರು ವಂಚನೆಯ ಸುಳಿಗೆ ಸಿಲುಕಿದ್ದಾರೆ.

ಈ ಹಿಂದೆಯೂ ನಡೆದಿರುವ ಇಂಥದೇ ವಂಚನೆಯ ಮಾದರಿಯಲ್ಲೇ, ವಂಚಕರು ದುಬೈಯಲ್ಲಿ ಕಚೇರಿಯೊಂದನ್ನು ತೆರೆದು ರಫ್ತುದಾರ ಕಂಪೆನಿಗಳಿಂದ ವಸ್ತುಗಳ ಸಗಟು ಖರೀದಿಗೆ ಬೇಡಿಕೆ ಸಲ್ಲಿಸಿದ್ದರು. ಅವರು ತಮ್ಮ ಕಂಪೆನಿಯ ಹೆಸರನ್ನು ಡೈರಾದ ವಿಳಾಸ ಹೊಂದಿರುವ ಒಪಿಸಿ ಫೂಡ್‌ಸ್ಟಫ್ ಟ್ರೇಡಿಂಗ್ ಎಂಬುದಾಗಿ ನೀಡಿದ್ದರು.

ಮುಂಗಡವಾಗಿ ರಫ್ತುದಾರರಿಗೆ 25-30 ಶೇಕಡ ಹಣವನ್ನು ಟೆಲೆಕ್ಸ್ ಟ್ರಾನ್ಸ್ ಫರ್ ಮೂಲಕ ಪಾವತಿಸಲಾಯಿತು. ಬಾಕಿ ಹಣವನ್ನು ಸರಕು ತಲುಪಿದ ಒಂದರಿಂದ ಮೂರು ವಾರಗಳಲ್ಲಿ ಪಾವತಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ, ಆ ಹಣ ರಫ್ತುದಾರರನ್ನು ತಲುಪಲೇ ಇಲ್ಲ. ಬದಲಿಗೆ, ಕಳೆದ ತಿಂಗಳು ಒಪಿಸಿ ಫೂಡ್‌ಸ್ಟಫ್ ಒಮ್ಮೆಲೆ ಬಾಗಿಲು ಹಾಕಿತು ಹಾಗೂ ಅದರ ಪಾಕಿಸ್ತಾನಿ ಮಾಲೀಕ ಸೇರಿದಂತೆ ಕಂಪೆನಿಯ ಎಲ್ಲ ಸಿಬ್ಬಂದಿ ಮರೆಯಾದರು ಎಂದು ವಂಚನೆಗೊಳಗಾದವರು ಹೇಳುತ್ತಾರೆ. ಅವರ ಫೋನ್‌ಗಳು ಸ್ವಿಚ್ಡ್ ಆಫ್ ಆಗಿವೆ.

ಭಾರತದ ಹಲವಾರು ರಫ್ತು ಕಂಪೆನಿಗಳು ಈ ಹಗರಣದಲ್ಲಿ ವಂಚನೆಗೊಳಗಾಗಿವೆ. ಅವುಗಳ ಪೈಕಿ ಹೆಚ್ಚಿ ನವುಗಳು ಹೊಸದಾಗಿ ಸ್ಥಾಪನೆಯಾಗಿರುವ ರಫ್ತು ಸಂಸ್ಥೆಗಳು.

ಒಟ್ಟು 288 ಟನ್ ಬಾಳೆಹಣ್ಣು, 147 ಟನ್ ದ್ರಾಕ್ಷಿ ಮತ್ತು ದಾಳಿಂಬೆ, 129 ಟನ್ ತೆಂಗಿನಕಾಯಿ, 90 ಟನ್ ಹಸಿಮೆಣಸು, 32 ಟನ್ ಟೊಮ್ಯಾಟೊ, 31 ಟನ್ ಶುಂಠಿ ಮತ್ತು ಸುಮಾರು 7 ಟನ್ ನಿಂಬೆಹಣ್ಣುಗಳನ್ನು ವಂಚಕ ಕಂಪೆನಿಯು ರಫ್ತು ರೂಪದಲ್ಲಿ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News