ಯುಎಇ: ಸ್ವದೇಶಕ್ಕೆ ಮರಳಲು 9,000 ಭಾರತೀಯರಿಂದ ಇ-ನೋಂದಣಿ

Update: 2020-04-30 17:21 GMT

ದುಬೈ, ಎ. 30: ಕೊರೋನ ವೈರಸ್ ತಡೆಗಾಗಿ ಹಾಕಲಾಗಿರುವ ಬೀಗಮುದ್ರೆಯ ಹಿನ್ನೆಲೆಯಲ್ಲಿ, ಯುಎಇಯಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರು, ಸ್ವದೇಶಕ್ಕೆ ಮರಳಲು ಉತ್ಸುಕರಾಗಿದ್ದಾರೆ. ಭಾರತೀಯರ ವಾಪಸಾತಿಗಾಗಿ ಇಲ್ಲಿನ ಭಾರತೀಯ ದೂತಾವಾಸಗಳು ಇ-ರಿಜಿಸ್ಟ್ರೇಶನ್ ಆರಂಭಿಸಿದ್ದು, 12 ಗಂಟೆಗಳಲ್ಲಿ ಸುಮಾರು 9,000 ಭಾರತೀಯರು ತಮ್ಮ ಹೆಸರುಗಳನ್ನು ನೋಂದಾಯಿಸಿದ್ದಾರೆ.

ಜನರು ತಮ್ಮ ಹೆಸರುಗಳನ್ನು ನೋಂದಾಯಿಸಲು ಭಾರೀ ಪ್ರಮಾಣದಲ್ಲಿ ಮುಗಿಬಿದ್ದ ಹಿನ್ನೆಲೆಯಲ್ಲಿ, ವೆಬ್‌ಸೈಟ್ ಹಲವು ಬಾರಿ ಸ್ಥಗಿತಗೊಂಡಿತು. ಹೆಸರುಗಳನ್ನು ನೋಂದಾಯಿಸಲು ಸಾಧ್ಯವಾಗುವವರೆಗೆ ಮುಂದಿನ ಕೆಲವು ದಿನಗಳಲ್ಲಿ ಪದೇ ಪದೇ ಪ್ರಯತ್ನಗಳನ್ನು ನಡೆಸುವಂತೆ ಅರ್ಜಿದಾರರಿಗೆ ತಿಳಿಸಲಾಗಿದೆ.

ಸ್ವದೇಶಕ್ಕೆ ವಾಪಸಾತಿಗಾಗಿ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂಬುದಾಗಿ ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ದುಬೈಯಲ್ಲಿರುವ ಭಾರತೀಯ ಕೌನ್ಸುಲೇಟ್ ಕಚೇರಿ ಬುಧವಾರ ರಾತ್ರಿ ಘೋಷಿಸಿದವು.

ಘೋಷಣೆಯ ಕೆಲವೇ ನಿಮಿಷಗಳಲ್ಲಿ ವೆಬ್‌ಸೈಟ್ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿತು. ಆಗ ನೋಂದಣಿ ಮಾಡುವುದಾಗಿ ಘೋಷಿಸಿದ್ದ ಟ್ವೀಟ್‌ಗಳನ್ನು ರಾಯಭಾರ ಕಚೇರಿಗಳು ಅಳಿಸಿಹಾಕಿದವು ಹಾಗೂ ಗಂಟೆಗಳ ಬಳಿಕ ಅದನ್ನು ಮರುಪೋಸ್ಟ್ ಮಾಡಿದವು.

ತಾಂತ್ರಿಕ ದೋಷಗಳ ಹೊರತಾಗಿಯೂ ಸುಮಾರು 9.000 ಮಂದಿ ತಮ್ಮ ವಿವರಗಳನ್ನು ನೋಂದಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ದುಬೈಯಲ್ಲಿರುವ ಭಾರತೀಯ ಕೌನ್ಸುಲ್ ಜನರಲ್ ವಿಪುಲ್ ಗಲ್ಫ್ ನ್ಯೂಸ್‌ಗೆ ಹೇಳಿದರು.

ಮೊದಲು ಪ್ರಯಾಣಿಸುವವರು ಯಾರು?

ಆರಂಭದಲ್ಲಿ ನೋಂದಣಿ ಮಾಡಿದವರನ್ನು ಆರಂಭಿಕ ವಿಮಾನಗಳಲ್ಲಿ ಕಳುಹಿಸಬೇಕೆಂದೇನೂ ಇಲ್ಲ ಎಂದು ಕೌನ್ಸುಲ್ ಜನರಲ್ ವಿಪುಲ್ ಹೇಳಿದರು. ತುರ್ತಾಗಿ ಭಾರತಕ್ಕೆ ಹೋಗಬೇಕಾದ ಅಗತ್ಯವಿರುವವರನ್ನು ಆದ್ಯತೆಯ ಮೇಲೆ ಆರಂಭಿಕ ವಿಮಾನಗಳಲ್ಲಿ ಕಳುಹಿಸಲಾಗುವುದು ಎಂದರು.

ಭಾರೀ ಕಷ್ಟದಲ್ಲಿರುವ ಕಾರ್ಮಿಕರು, ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವವರು, ಗರ್ಭಿಣಿಯರು, ಹಿರಿಯರು ಮತ್ತು ದುಬೈ ವಿಮಾನ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡಿರುವವರನ್ನು ಆದ್ಯತೆಯ ಮೇಲೆ ಭಾರತಕ್ಕೆ ಕಳುಹಿಸಲಾಗುವುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News