ಯುಎಇ: ಸ್ವದೇಶಕ್ಕೆ ಮರಳಲು 32,000 ಭಾರತೀಯರಿಂದ ಇ-ನೋಂದಣಿ

Update: 2020-05-01 10:38 GMT

ದುಬೈ, ಎ. 30: ಕೊರೋನವೈರಸ್ ತಡೆಗಾಗಿ ಹಾಕಲಾಗಿರುವ ಬೀಗಮುದ್ರೆಯ ಹಿನ್ನೆಲೆಯಲ್ಲಿ, ಯುಎಇಯಲ್ಲಿ ಸಿಕ್ಕಿ ಹಾಕಿಕೊಂಡಿರುವ ಭಾರತೀಯರು, ಸ್ವದೇಶಕ್ಕೆ ಮರಳಲು ಉತ್ಸುಕರಾಗಿದ್ದಾರೆ. ಭಾರತೀಯರ ವಾಪಸಾತಿಗಾಗಿ ಇಲ್ಲಿನ ಭಾರತೀಯ ದೂತಾವಾಸಗಳು ಇ-ರಿಜಿಸ್ಟ್ರೇಶನ್ ಆರಂಭಿಸಿದ ನಂತರ ಮೊದಲ ದಿನ ಸುಮಾರು 32,000ಕ್ಕೂ ಅಧಿಕ ಭಾರತೀಯರು ತಮ್ಮ ಹೆಸರುಗಳನ್ನು ನೋಂದಾಯಿಸಿದ್ದಾರೆ.

ಗುರುವಾರ ಸಂಜೆ 5 ಗಂಟೆಯ ವೇಳೆಗೆ ನಾವು 32,000ಕ್ಕೂ ಅಧಿಕ ರಿಜಿಸ್ಟ್ರೇಶನ್‌ಗಳನ್ನು ಸ್ವೀಕರಿಸಿದ್ದೇವೆ ಎಂದು ದುಬೈನಲ್ಲಿರುವ ಭಾರತದ ಕೌನ್ಸುಲ್ ಜನರಲ್ ವಿಪುಲ್ ಗಲ್ಫ್ ನ್ಯೂಸ್‌ಗೆ ತಿಳಿಸಿದ್ದಾರೆ.

201 ದೇಶಗಳಲ್ಲಿ ನೆಲೆಸಿರುವ ಮಲಯಾಳಿಗಳಿಂದ 3,53,468 ರಿಜಿಸ್ಟ್ರೇಶನ್‌ಗಳನ್ನು ಸ್ವೀಕರಿಸಲಾಗಿದೆ. ಯುಎಇಯಿಂದ ಗರಿಷ್ಠ 1,53,660 ರಿಜಿಸ್ಟ್ರೇಶನ್ ಸ್ವೀಕರಿಸಲಾಗಿದೆ ಎಂದು ಇದೇ ವೇಳೆ ಕೇರಳ ಸರಕಾರ ಗುರುವಾರ ತಿಳಿಸಿದೆ.

ಜನರು ತಮ್ಮ ಹೆಸರುಗಳನ್ನು ನೋಂದಾಯಿಸಲು ಭಾರೀ ಪ್ರಮಾಣದಲ್ಲಿ ಮುಗಿಬಿದ್ದ ಹಿನ್ನೆಲೆಯಲ್ಲಿ, ವೆಬ್ಸೈಟ್ ಹಲವು ಬಾರಿ ಸ್ಥಗಿತಗೊಂಡಿತು. ಹೆಸರುಗಳನ್ನು ನೋಂದಾಯಿಸಲು ಸಾಧ್ಯವಾಗುವವರೆಗೆ ಮುಂದಿನ ಕೆಲವು ದಿನಗಳಲ್ಲಿ ಪದೇ ಪದೇ ಪ್ರಯತ್ನಗಳನ್ನು ನಡೆಸುವಂತೆ ಅರ್ಜಿದಾರರಿಗೆ ತಿಳಿಸಲಾಗಿದೆ.

ಸ್ವದೇಶಕ್ಕೆ ವಾಪಸಾತಿಗಾಗಿ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂಬುದಾಗಿ ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ದುಬೈಯಲ್ಲಿರುವ ಭಾರತೀಯ ಕೌನ್ಸುಲೇಟ್ ಕಚೇರಿ ಬುಧವಾರ ರಾತ್ರಿ ಘೋಷಿಸಿದವು.

ಘೋಷಣೆಯ ಕೆಲವೇ ನಿಮಿಷಗಳಲ್ಲಿ ವೆಬ್ಸೈಟ್ ತಾಂತ್ರಿ ಸಮಸ್ಯೆಗಳನ್ನು ಎದುರಿಸಿತು. ಆಗ ನೋಂದಣಿ ಮಾಡುವುದಾಗಿ ಘೋಷಿಸಿದ್ದ ಟ್ವೀಟ್ ಗಳನ್ನು ರಾಯಭಾರಿ ಕಚೇರಿಗಳು ಅಳಿಸಿಹಾಕಿದವು ಹಾಗೂ ಗಂಟೆಗಳ ಬಳಿಕ ಅದನ್ನು ಮರುಪೋಸ್ಟ್ ಮಾಡಿದವು.

ತಾಂತ್ರಿಕ ದೋಷಗಳ ಹೊರತಾಗಿಯೂ ಸುಮಾರು 32,000ಮಂದಿ ತಮ್ಮ ವಿವರಗಳನ್ನು ನೋಂದಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ದುಬೈಯಲ್ಲಿರುವ ಭಾರತೀಯ ಕೌನ್ಸುಲ್ ಜನರಲ್ ವಿಪುಲ್ ಗಲ್ಫ್ ನ್ಯೂಸ್ ಗೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News