ಸೌದಿ: ‘ಮಸೀದಿಗಳಲ್ಲಿ ಪ್ರಾರ್ಥನೆ’ ಎಂದು ಸುಳ್ಳು ಸುದ್ದಿ ಹರಡಿದ ವ್ಯಕ್ತಿಯ ಬಂಧನ

Update: 2020-05-02 16:18 GMT

ರಿಯಾದ್ (ಸೌದಿ ಅರೇಬಿಯ), ಮೇ 2: ಮುಸ್ಲಿಮರು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವುದಕ್ಕಾಗಿ ದಿನಾಂಕವೊಂದನ್ನು ನಿಗದಿಪಡಿಸಲಾಗಿದೆ ಎಂಬುದಾಗಿ ಆನ್‌ಲೈನ್ ವೀಡಿಯೊವೊಂದರ ಮೂಲಕ ಘೋಷಿಸಿದ ವ್ಯಕ್ತಿಯೊಬ್ಬನನ್ನು ಸೌದಿ ಅರೇಬಿಯ ಪೊಲೀಸರು ಬಂಧಿಸಿದ್ದಾರೆ ಎಂದು ದೇಶದ ಅಧಿಕೃತ ಸುದ್ದಿಸಂಸ್ಥೆ ಸೌದಿ ಪ್ರೆಸ್ ಏಜನ್ಸಿ (ಎಸ್‌ಪಿಎ) ಶನಿವಾರ ವರದಿ ಮಾಡಿದೆ.

ನೋವೆಲ್-ಕೊರೋನ ವೈರಸ್ ಹರಡುವುದನ್ನು ತಡೆಯುವುದಕ್ಕಾಗಿ ಸೌದಿ ಅರೇಬಿಯದಲ್ಲಿ ಎಲ್ಲ ಮಸೀದಿಗಳನ್ನು ಈಗ ಮುಚ್ಚಲಾಗಿದೆ.

“ಕೊರೋನವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ತೆಗೆದುಕೊಳ್ಳಲಾಗಿರುವ ಕ್ರಮಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಿಯೋರ್ವ ಹೇಳಿಕೆ ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ. ಮಸೀದಿಗಳಲ್ಲಿ ಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸಲು ದಿನಾಂಕವೊಂದನ್ನು ನಿಗದಿಪಡಿಸಲಾಗಿದೆ ಹಾಗೂ ಕರ್ಫ್ಯೂ ಮತ್ತು ತಪಾಸಣೆ ಸಮಯಗಳಲ್ಲಿ ಬದಲಾವಣೆ ಮಾಡಲಾಗಿದೆ” ಎಂಬುದಾಗಿ ಆ ವ್ಯಕ್ತಿಯು ತನ್ನ ವೀಡಿಯೊದಲ್ಲಿ ಹೇಳಿಕೊಂಡಿದ್ದಾನೆ. ಆತನನ್ನು ಈಗ ಗುರುತಿಸಿ ಬಂಧಿಸಲಾಗಿದೆ ಎಂದು ರಿಯಾದ್ ವಲಯದ ಪೊಲೀಸ್ ವಕ್ತಾರರು ಹೇಳಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸಾರ್ವಜನಿಕ ವ್ಯವಸ್ಥೆಯನ್ನು ಹದಗೆಡಿಸುವ ಸುಳ್ಳು ಊಹಾಪೋಹಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದರ ವಿರುದ್ಧ ಸೌದಿ ಅಧಿಕಾರಿಗಳು ಪದೇ ಪದೇ ಎಚ್ಚರಿಕೆ ನೀಡುತ್ತಾ ಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News