ಯುಎಇ: ಕೋಮುದ್ವೇಷದ ಪೋಸ್ಟ್ ಮಾಡಿದ ಕಿನ್ನಿಗೋಳಿಯ ಯುವಕ ಸೇರಿ ಮೂವರ ವಿರುದ್ಧ ಕ್ರಮ

Update: 2020-05-03 16:52 GMT

ದುಬೈ: ದ್ವೇಷದ ಪೋಸ್ಟ್ ಗಳ ಬಗ್ಗೆ ಭಾರತೀಯ ರಾಯಭಾರಿ ಕಚೇರಿ ಎಚ್ಚರಿಕೆ ನೀಡಿದ್ದರೂ ದ್ವೇಷ ಹಂಚುವುದನ್ನು ಮುಂದುವರಿಸಿದ ಮೂವರು ಅನಿವಾಸಿ ಭಾರತೀಯರ ವಿರುದ್ಧ ಯುಎಇಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು gulfnews.com ವರದಿ ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಮೋಫೋಬಿಯಾ ಪೋಸ್ಟ್ ಗಳನ್ನು ಹಾಕಿದ್ದಕ್ಕಾಗಿ ಕಳೆದೊಂದು ವಾರದಲ್ಲಿ ಕನಿಷ್ಟ ಮೂವರು ಅನಿವಾಸಿ ಭಾರತೀಯರನ್ನು ಉದ್ಯೋಗದಿಂದ ಅಮಾನತುಗೊಳಿಸಲಾಗಿದೆ ಅಥವಾ ವಜಾಗೊಳಿಸಲಾಗಿದೆ ಎಂದು ವರದಿಯಾಗಿದೆ.

ಇಟಾಲಿಯನ್ ಶೆಫ್ ರಾವತ್ ರೋಹಿತ್, ಸ್ಟೋರ್ ಕೀಪರ್ ಸಚಿನ್ ಕಿನ್ನಿಗೋಳಿ ಮತ್ತು ಇನ್ನೊಬ್ಬನ ವಿರುದ್ಧ ಯುಎಇ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ.

ದ್ವೇಷದ ಪೋಸ್ಟ್ ಹಾಕಿದ್ದಕ್ಕಾಗಿ ರಾವತ್ ರೋಹಿತ್ ಎಂಬಾತನನ್ನು ಕೆಲಸದಿಂದ ಅಮಾನತುಗೊಳಿಸಲಾಗಿದ್ದು, ಶಿಸ್ತುಕ್ರಮ ಕೈಗೊಳ್ಳುವ ಕುರಿತು ತನಿಖೆ ನಡೆಯುತ್ತಿದೆ ಎಂದು ದುಬೈಯ ಇಟಾಲಿಯನ್ ರೆಸ್ಟೋರೆಂಟ್ ಚೈನ್ ಆದ ಅಝಾದಿಯಾ ಗ್ರೂಪ್ ಮಾಹಿತಿ ನೀಡಿದೆ.

ಶಾರ್ಜಾ ಮೂಲದ ನ್ಯೂಮಿಕ್ಸ್ ಆಟೋಮೇಶನ್ ನಲ್ಲಿ ಉದ್ಯೋಗದಲ್ಲಿದ್ದ ಸ್ಟೋರ್ ಕೀಪರ್ ಸಚಿನ್ ಕಿನ್ನಿಗೋಳಿ ಎಂಬಾತನನ್ನು ಅಮಾನತುಗೊಳಿಸಲಾಗಿದೆ ಎಂದು ಸಂಸ್ಥೆಯು ಸ್ಪಷ್ಟಪಡಿಸಿದೆ.

“ನಾವು ಆತನ ವೇತನವನ್ನು ತಡೆ ಹಿಡಿದಿದ್ದೇವೆ ಮತ್ತು ಕೆಲಸಕ್ಕೆ ಬರದಂತೆ ತಿಳಿಸಿದ್ದೇವೆ. ಪ್ರಕರಣದ ತನಿಖೆ ನಡೆಯುತ್ತಿದೆ. ಇಂತಹದ್ದನ್ನು ನಾವು ಸಹಿಸುವುದಿಲ್ಲ. ಬೇರೆ ಯಾವುದೇ ಧರ್ಮವನ್ನು ನಿಂದಿಸಿದರೆ ಅಂತಹವು ಕಠಿಣ ಕ್ರಮಗಳನ್ನು ಎದುರಿಸಬೇಕಾದೀತು” ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

ವಿಶಾಲ್ ಠಾಕೂರ್ ಹೆಸರಿನಲ್ಲಿ ತನ್ನ ಫೇಸ್‌ಬುಕ್ ಪುಟದಲ್ಲಿ ಹಲವಾರು ಇಸ್ಲಾಮ್ ವಿರೋಧಿ ಸಂದೇಶಗಳನ್ನು ಹಾಕಿರುವ ಉದ್ಯೋಗಿಯೊಬ್ಬನ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ದುಬೈಯ ಟ್ರಾನ್ಸ್‌ಗಾರ್ಡ್ ಗ್ರೂಪ್ ತಿಳಿಸಿದೆ.

ಆಂತರಿಕ ವಿಚಾರಣೆಯ ಬಳಿಕ, ಈ ಉದ್ಯೋಗಿಯ ಅಸಲಿ ಗುರುತನ್ನು ಪತ್ತೆಹಚ್ಚಲಾಯಿತು. ಆತನನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಹಾಗೂ ಯುಎಇ ಸೈಬರ್ ಅಪರಾಧ ಕಾನೂನಿನ ಅನ್ವಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಅವನು ಈಗ ದುಬೈ ಪೊಲೀಸರ ಸುಪರ್ದಿಯಲ್ಲಿದ್ದಾನೆ ಎಂದು ಗಲ್ಫ್ ನ್ಯೂಸ್‌ಗೆ ನೀಡಿದ ಹೇಳಿಕೆಯೊಂದರಲ್ಲಿ ಟ್ರಾನ್ಸ್‌ಗಾರ್ಡ್ ವಕ್ತಾರರೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News