ಯುಎಇಯಿಂದ ಸ್ವದೇಶಕ್ಕೆ ವಾಪಸಾಗಲು 1.5 ಲಕ್ಷ ಭಾರತೀಯರಿಂದ ನೋಂದಣಿ

Update: 2020-05-03 16:30 GMT

ದುಬೈ, ಮೇ 3: ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹೇರಲಾಗಿರುವ ಬೀಗಮುದ್ರೆಯಿಂದಾಗಿ ಯುಎಇಯಲ್ಲಿ ಸಿಕ್ಕಿಹಾಕಿಕೊಂಡಿರುವ 1.50 ಲಕ್ಷಕ್ಕೂ ಅಧಿಕ ಭಾರತೀಯರು ತಾಯ್ನಾಡಿಗೆ ವಾಪಸಾಗುವುದಕ್ಕಾಗಿ ಇ-ನೋಂದಣಿ ಮಾಡಿಕೊಂಡಿದ್ದಾರೆ.

ಶನಿವಾರ ಸಂಜೆ 6 ಗಂಟೆಯ ವೇಳೆಗೆ, 1,50,000ಕ್ಕೂ ಅಧಿಕ ಮಂದಿ ಈ ಉದ್ದೇಶಕ್ಕಾಗಿ ಸ್ಥಾಪಿಸಲಾಗಿರುವ ವೆಬ್‌ಸೈಟ್‌ಗಳಲ್ಲಿ ಭಾರತಕ್ಕೆ ವಾಪಸಾತಿಗಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ದುಬೈಯಲ್ಲಿರುವ ಭಾರತೀಯ ಕೌನ್ಸುಲ್ ಜನರಲ್ ವಿಪುಲ್ ಶನಿವಾರ ಗಲ್ಫ್ ನ್ಯೂಸ್‌ಗೆ ತಿಳಿಸಿದರು.

ಈ ಪೈಕಿ ಕಾಲು ಭಾಗ ಜನರು ತಮ್ಮ ಕೆಲಸ ಕಳೆದುಕೊಂಡ ಬಳಿಕ ಸ್ವದೇಶಕ್ಕೆ ಮರಳಲು ಬಯಸಿದ್ದಾರೆ ಎಂದು ಅವರು ತಿಳಿಸಿದರು.

ನೋಂದಣಿ ಮಾಡಿಕೊಂಡಿರುವವರ ಪೈಕಿ ಸುಮಾರು 40 ಶೇಕಡ ಕಾರ್ಮಿಕರಾಗಿದ್ದಾರೆ ಹಾಗೂ ಸುಮಾರು 20 ಶೇಕಡ ಕೌಶಲಭರಿತ ಉದ್ಯೋಗಿಗಳಾಗಿದ್ದಾರೆ. ಒಟ್ಟಾರೆಯಾಗಿ 25 ಶೇಕಡ ಮಂದಿ ತಾವು ತಾಯ್ನಾಡಿಗೆ ಮರಳಲು ತಾವು ಉದ್ಯೋಗಿ ಕಳೆದುಕೊಂಡಿರುವುದು ಕಾರಣ ಎಂದು ಹೇಳಿದ್ದಾರೆ ಎಂದರು.

ಅರ್ಜಿದಾರರ ಪೈಕಿ ಸುಮರು 10 ಶೇಕಡ ಮಂದಿ ಸಂದರ್ಶನ ಅಥವಾ ಪ್ರವಾಸಿ ವೀಸಾಗಳಲ್ಲಿ ಯುಎಇಗೆ ಹೋಗಿ ಸಿಕ್ಕಿ ಹಾಕಿಕೊಂಡವರು. ಭಾರತದಲ್ಲಿ ವಿಮಾನ ಹಾರಾಟ ನಿಷೇಧ ಮತ್ತು ಬೀಗಮುದ್ರೆಯಿಂದಾಗಿ ಅವರಿಗೆ ಮರಳಲು ಸಾಧ್ಯವಾಗಿರಲಿಲ್ಲ.

ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ದುಬೈಯಲ್ಲಿರುವ ಭಾರತೀಯ ಕೌನ್ಸುಲೇಟ್ ಕಚೇರಿಗಳು ಬುಧವಾರ ರಾತ್ರಿ, ಸ್ವದೇಶಕ್ಕೆ ಮರಳುವ ಭಾರತೀಯರಿಗಾಗಿ ಇಲೆಕ್ಟ್ರಾನಿಕ್-ನೋಂದಣಿ (ಇ-ನೋಂದಣಿ) ಪ್ರಕ್ರಿಯೆಯನ್ನು ಆರಂಭಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News