‘ದ್ವೇಷ ಪ್ರಚಾರಕ’ ಟಿವಿ ವಾಹಿನಿಗಳ ವಿರುದ್ಧ ಭಾರತ ಕ್ರಮ ಕೈಗೊಳ್ಳಲಿ: ‘ಗಲ್ಫ್ ನ್ಯೂಸ್’ ಸಂಪಾದಕೀಯ ಆಗ್ರಹ

Update: 2020-05-07 11:23 GMT

ಹೊಸದಿಲ್ಲಿ: ‘ವಿಷಕಾರಿ' ಭಾರತೀಯ ಟಿವಿ ವಾಹಿನಿಗಳಿಗೆ ‘ಇಸ್ಲಾಮೋಫೋಬಿಯಾ ಹರಡಲು ಹಾಗೂ ವಾತಾವರಣವನ್ನು ಇನ್ನಷ್ಟು ಹದಗಡಿಸಲು’ ಅನುಮತಿಸಬಾರದು ಎಂದು  ದುಬೈ ಮೂಲದ ಗಲ್ಫ್ ನ್ಯೂಸ್ ತನ್ನ ಮೇ 6ರ ಸಂಪಾದಕೀಯದಲ್ಲಿ ಬರೆದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ಪೋಸ್ಟ್ ಮಾಡಿದ್ದಕ್ಕಾಗಿ ಸಂಯುಕ್ತ ಅರಬ್ ಸಂಸ್ಥಾನದಲ್ಲಿರುವ ಹಲವು ಭಾರತೀಯ ವಲಸಿಗರನ್ನು ಅವರ ಮಾಲಕರು ಉದ್ಯೋಗಗಳಿಂದ ವಜಾಗೊಳಿಸಿದ  ಅಥವಾ ಅವರ ‘ದ್ವೇಷದ ಭಾವನೆ ಹಾಗೂ ಧಾರ್ಮಿಕ ತಾರತಮ್ಯ'ಕ್ಕಾಗಿ ಅವರನ್ನು ತರಾಟೆಗೆ ತೆಗೆದುಕೊಂಡ ಹಲವು ನಿದರ್ಶನಗಳಿವೆ ಎಂದು ‘ಸ್ಟಾಪ್ ಇಂಡಿಯನ್ ಮೀಡಿಯಾ ಫ್ರಮ್ ಎಕ್ಸ್‍ಪೋರ್ಟಿಂಗ್ ಹೇಟ್ ಟು ಗಲ್ಫ್' ಎಂಬ ಶೀರ್ಷಿಕೆಯ ಈ ಸಂಪಾದಕೀಯದಲ್ಲಿ ಬರೆಯಲಾಗಿದೆ.

‘ಭಾರತದ ಜನಪ್ರಿಯ ವಾಹಿನಿಗಳು ಸುದ್ದಿಯನ್ನು ತಿರುಚಿ ನಕಲಿ ವಿವರಣೆಗಳನ್ನು ನೀಡುವ ಮೂಲಕ ಮುಸ್ಲಿಮರನ್ನು ಟಾರ್ಗೆಟ್ ಮಾಡುತ್ತಿರುವುದು ಎಲ್ಲರಿಗೂ ತಿಳಿದಿದೆ’ ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ. “ಉದಾಹರಣೆಯಾಗಿ ಕೊರೋನವೈರಸ್ ಹರಡಲು ಮುಸ್ಲಿಮರು ಹಣ್ಣುಗಳ ಮೇಲೆ ಉಗುಳುತ್ತಿರುವ ನಕಲಿ ಸುದ್ದಿಗಳನ್ನು ಪ್ರಟಿಸಿವೆ. ಜನರು ಇದನ್ನು ನಿಜವೆಂದೇ ನಂಬುವ ತನಕ ಈ ನಕಲಿ ಸುದ್ದಿಯನ್ನು ಹಲವು ಸುದ್ದಿ ವಾಹಿನಿಗಳು ಸತತ ಪ್ರಸಾರ ಮಾಡಿವೆ. ಈ ದ್ವೇಷಪೂರಿತ ವಿಚಾರಗಳು ಯುಎಇ ಸಹಿತ ಗಲ್ಫ್ ರಾಷ್ಟ್ರಗಳನ್ನು ಪ್ರೈಮ್ ಟೈಮ್ ಸಂದರ್ಭ ತಲುಪುತ್ತವೆ'' ಎಂದೂ ಬರೆಯಲಾಗಿದೆ.

`ದ್ವೇಷ ಪ್ರಚಾರಕ' ಟಿವಿ ವಾಹಿನಿಗಳು, ಮುಖ್ಯವಾಗಿ ರಿಪಬ್ಲಿಕ್ ಟಿವಿ, ಝೀ ನ್ಯೂಸ್, ಇಂಡಿಯಾ ಟಿವಿ, ಆಜ್ ತಕ್, ಎಬಿಪಿ ಹಾಗೂ ಟೈಮ್ಸ್ ನೌ ವಾಹಿನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದೂ ಸಂಯುಕ್ತ ಅರಬ್ ಸಂಸ್ಥಾನದ ಆಡಳಿತವನ್ನು ಗಲ್ಫ್ ನ್ಯೂಸ್ ಕೇಳಿಕೊಂಡಿದೆ. “ವಿವಿಧ ಜಾತಿಗಳ ಹಾಗೂ ಧಾರ್ಮಿಕ ಹಿನ್ನೆಲೆಯುಳ್ಳ ಜನರು ಶಾಂತಿಯುತವಾಗಿ ಕೆಲಸ ಮಾಡಿಕೊಂಡಿರುವ ಗಲ್ಫ್ ರಾಷ್ಟ್ರಗಳಲ್ಲಿ ಸಾಮಾಜಿಕ ಸಾಮರಸ್ಯದ ವಾತಾವರಣವನ್ನು ಹದಗೆಡಿಸಲು ಅವರಿಗೆ ಅನುಮತಿಸಬಾರದು'' ಎಂದೂ ಗಲ್ಫ್ ನ್ಯೂಸ್ ಸಂಪಾದಕೀಯ ಕೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News