ಅಬುಧಾಬಿ ಕಮರ್ಶಿಯಲ್ ಬ್ಯಾಂಕ್‌ನ ಲಾಭದಲ್ಲಿ ಭಾರೀ ಖೋತಾ

Update: 2020-05-07 15:46 GMT

ದುಬೈ, ಮೇ 7: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಮೂರನೇ ಅತಿ ದೊಡ್ಡ ಬ್ಯಾಂಕ್ ಆಗಿರುವ ಅಬುಧಾಬಿ ಕಮರ್ಶಿಯಲ್ ಬ್ಯಾಂಕ್ (ಎಡಿಸಿಬಿ) ಗುರುವಾರ ಬಹಿರಂಗಪಡಿಸಿದ ತನ್ನ ಪ್ರಥಮ ತ್ರೈಮಾಸಿಕದ ನಿವ್ವಳ ಲಾಭದಲ್ಲಿ 84 ಶೇಕಡದಷ್ಟು ಕಡಿಮೆಯಾಗಿದೆ ಎಂದು ‘ಖಲೀಜ್ ಟೈಮ್ಸ್’ ವರದಿ ಮಾಡಿದೆ.

ಬಿ.ಆರ್. ಶೆಟ್ಟಿ ಒಡೆತನದ ಕಂಪೆನಿಗಳಾದ ಎನ್‌ಎಮ್‌ಸಿ ಹೆಲ್ತ್ ಮತ್ತು ಫೈನಬ್ಲರ್‌ಗೆ ನೀಡಿರುವ ಸಾಲವು ಅಪಾಯದಲ್ಲಿದ್ದು, ಅದರಿಂದ ಬರಬೇಕಾದ 292 ಮಿಲಿಯ ಡಾಲರ್ (ಸುಮಾರು 2,214 ಕೋಟಿ ರೂಪಾಯಿ) ಪಾವತಿ ಬಂದಿಲ್ಲವಾದುದರಿಂದ ಬ್ಯಾಂಕ್‌ನ ಲಾಭ ಗಮನಾರ್ಹ ಪ್ರಮಾಣದಲ್ಲಿ ಕುಸಿದಿದೆ ಎನ್ನಲಾಗಿದೆ.

ಎಡಿಸಿಬಿಯು ಎನ್‌ಎಮ್‌ಸಿ ಹೆಲ್ತ್‌ನ ಪ್ರಮುಖ ಹಣಕಾಸು ಪೂರೈಕೆದಾರನಾಗಿದ್ದು, ಕಂಪೆನಿಗೆ ನೀಡಿರುವ 981 ಮಿಲಿಯ ಡಾಲರ್ (ಸುಮಾರು 7,439 ಕೋಟಿ ರೂಪಾಯಿ) ಸಾಲ ಈಗ ಅಪಾಯದಲ್ಲಿದೆ.

ತನ್ನ ಕಂಪೆನಿಯ ಸಾಲಗಳನ್ನು ಮುಚ್ಚಿಟ್ಟು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್‌ನಿಂದ ಭಾರೀ ಪ್ರಮಾಣದಲ್ಲಿ ಸಾಲಗಳನ್ನು ಪಡೆದುಕೊಂಡಿರುವ ಆರೋಪವನ್ನು ಬಿ.ಆರ್. ಶೆಟ್ಟಿ ಎದುರಿಸುತ್ತಿದ್ದಾರೆ.

ಈ ಬಗ್ಗೆ ದೂರು ದಾಖಲಾದ ಬಳಿಕ, ಲಂಡನ್ ಹೈಕೋರ್ಟ್‌ನ ಆದೇಶದಂತೆ ಎನ್‌ಎಮ್‌ಸಿ ಹೆಲ್ತ್ ಈಗ ಆಡಳಿತಾಧಿಕಾರಿಗಳ ಸುಪರ್ದಿಯಲ್ಲಿದೆ.

ಎಡಿಸಿಬಿಯು ಶೆಟ್ಟಿಯವರದೇ ಒಡೆತನದ ಫೈನಬ್ಲರ್ ಹಣಕಾಸು ಕಂಪೆನಿಗೂ ಸಾಲ ನೀಡಿದ್ದು, ಅದರಲ್ಲಿ ಈಗ 182 ಮಿಲಿಯ ಡಾಲರ್ (ಸುಮಾರು 1,380 ಕೋಟಿ ರೂಪಾಯಿ) ಅಪಾಯದಲ್ಲಿದೆ.

ಮಾರ್ಚ್ 31ರಂದು ಕೊನೆಗೊಂಡ ತ್ರೈಮಾಸಿಕದಲ್ಲಿ 209 ಮಿಲಿಯ ದಿರ್ಹಮ್ (ಸುಮಾರು 432 ಕೋಟಿ ರೂಪಾಯಿ) ಲಾಭವಾಗಿದೆ ಎಂದು ಎಡಿಸಿಬಿ ಹೇಳಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಅದು 1.3 ಬಿಲಿಯ ದಿರ್ಹಮ್ (2,683 ಕೋಟಿ ರೂಪಾಯಿ) ಲಾಭ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News