ಯುಎಇ: ವಿಮಾನದ ಟಿಕೆಟ್ ಹಣಕ್ಕಾಗಿ ಚಿನ್ನಾಭರಣ ಮಾರುತ್ತಿದ್ದಾರೆ ಭಾರತೀಯ ವಲಸಿಗರು !

Update: 2020-05-08 18:36 GMT

ದುಬೈ, ಮೇ 8 : ಕೊರೋನ ಲಾಕ್ ಡೌನ್ ನಿಂದಾಗಿ ಯುಎಇ ಯಲ್ಲಿ ಭಾರತೀಯ ವಲಸಿಗರು ಈಗ ಸ್ವದೇಶಕ್ಕೆ ಮರಳುವ ವಿಮಾನದ ಟಿಕೆಟ್ ಖರೀದಿಸಲು ತಮ್ಮ ಬಳಿ ಇರುವ ಚಿನ್ನಾಭರಣಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು  ಗಲ್ಫ್ ನ್ಯೂಸ್ ವರದಿ ಮಾಡಿದೆ. ಭಾರತ ಇತ್ತೀಚಿಗೆ ಯುಎಇ ಗೆ ತಾತ್ಕಾಲಿಕ ಭೇಟಿಗೆ ತೆರಳಿ ಅಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಮರಳಿ ಕರೆತರಲು ವಿಶೇಷ ವಿಮಾನಗಳು ಮೇ 7 ರಿಂದ ಪ್ರಾರಂಭವಾಗಲಿವೆ ಎಂದು ಘೋಷಿಸಿತ್ತು. ಆದರೆ ಈ ವಿಮಾನದ ಟಿಕೆಟ್ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕು. ಪ್ರತಿ ಟಿಕೆಟ್ ಗೆ 750 ದಿರ್ಹಮ್ ( ಸುಮಾರು 15,000 ರೂಪಾಯಿ ) ದರ ನಿಗದಿಪಡಿಸಲಾಗಿದೆ.   

ಈಗಾಗಲೇ ಕೆಲಸ ಕಳೆದುಕೊಂಡವರು, ಸಂಬಳದಲ್ಲಿ ಕಡಿತವಾದವರು, ಸಂಬಳವೇ ಸಿಗದವರು ಕೈಯಲ್ಲಿ ನಗದು ಹಣವಿಲ್ಲದೆ ಸಮಸ್ಯೆಯಲ್ಲಿದ್ದು ತಮ್ಮ ಬಳಿ ಇರುವ ಚಿನ್ನಾಭರಣಗಳನ್ನು ಮಾರಾಟ ಮಾಡಿ ಹಣ ಹೊಂದಿಸುತ್ತಿದ್ದಾರೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.   

ಎಪ್ರಿಲ್ 26 ರಿಂದ  ದುಬೈಯಲ್ಲಿ ಚಿನ್ನಾಭರಣ ಮಳಿಗೆಗಳು ತೆರೆದಿವೆ. ಅವತ್ತಿನಿಂದಲೇ ಚಿನ್ನ ಮಾರಾಟ ಮಾಡಿ ಹಣ ವ್ಯವಸ್ಥೆ ಮಾಡಲು ಜನರು ಕರೆ ಮಾಡಿ ಕೇಳುತ್ತಿದ್ದಾರೆ, ಚಿನ್ನಕ್ಕೆ ನಗದು ಹಣ ಕೊಡುತ್ತೀರಾ ಎಂದು ಖಚಿತಪಡಿಸಿಕೊಳ್ಳುತ್ತಿದ್ದಾರೆ ಎಂದು ದುಬೈ ಗೋಲ್ಡ್ ಎಂಡ್ ಜೆವೆಲರಿ ಗ್ರೂಪ್ ನ ಸದಸ್ಯರೋರ್ವರು ಗಲ್ಫ್ ನ್ಯೂಸ್ ಗೆ ಹೇಳಿದ್ದಾರೆ. 

ಕಳೆದ ಎರಡು ದಿನಗಳಲ್ಲಿ ಹಣಕ್ಕಾಗಿ ಚಿನ್ನ ಮಾರುವ ವ್ಯವಹಾರ ಬಹಳ ಹೆಚ್ಚಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ. ಮುಂದಿನ ದಿನಗಳಲ್ಲಿ ಅದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇಲ್ಲಿನ ಮೀನಾ ಬಝಾರ್ ಅಥವಾ ದೇರಾ ಸೂಕ್ ಗಳಲ್ಲಿರುವ ಸಣ್ಣ ಚಿನ್ನಾಭರಣ ಅಂಗಡಿಗಳಲ್ಲೇ ಈ ವ್ಯವಹಾರ ಹೆಚ್ಚಾಗಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ. 

ಚಿನ್ನದ ಬೆಲೆ ಇತ್ತೀಚಿನ ವಾರಗಳಲ್ಲಿ ಕಳೆದ ಏಳು ವರ್ಷಗಳಲ್ಲೇ ಅತಿ ಹೆಚ್ಚಾಗಿರುವುದು ಮಾರಾಟ ಮಾಡುವವರಿಗೆ ಇನ್ನಷ್ಟು ಅನುಕೂಲವಾಗಿದೆ. ಹೀಗಾಗಿ ಮಾರಾಟ ಮಾಡುವ ಆಸಕ್ತಿಯೂ ಹೆಚ್ಚಿದೆ ಎಂದು ಹೇಳಲಾಗಿದೆ. 

ಕೆಲವೇ ದಿನಗಳಿಗಾಗಿ ದುಬೈ ಗೆ ಪ್ರವಾಸ ಹೋಗಿದ್ದ ದೊಡ್ಡ ಸಂಖ್ಯೆಯ ಜನರು ಅಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲಿ ಉದ್ಯೋಗದಲ್ಲಿರುವವರ ಕುಟುಂಬ ಸದಸ್ಯರು, ಅದರಲ್ಲೂ ವೃದ್ಧರು, ಮಹಿಳೆಯರು, ವಿವಿಧ ಅನಾರೋಗ್ಯ ಪೀಡಿತರು, ಗರ್ಭಿಣಿಯರು ಇವರಲ್ಲಿದ್ದಾರೆ. ಜೊತೆಗೆ ಅಲ್ಲಿಗೆ ಇವರನ್ನು ಕರೆಸಿಕೊಂಡವರಿಗೆ ಲಾಕ್ ಡೌನ್ ನಿಂದಾಗಿ ಉದ್ಯೋಗದಲ್ಲಿ ಏರುಪೇರಾಗಿ ಕೈ ಖಾಲಿಯಾಗಿದೆ. ಆದರೆ ವಿಮಾನವಿಲ್ಲದೆ ವಾಪಸ್ ಬರುವಂತೆಯೂ ಇಲ್ಲ, ಅಲ್ಲಿ ದುಬಾರಿ ಬಾಡಿಗೆ ತೆತ್ತು ಊಟ ತಿಂಡಿಗೆ ಖರ್ಚು ಮಾಡಿಕೊಂಡು ಇರುವಂತೆಯೂ ಇಲ್ಲ ಎಂಬಂತಹ ಸಂಕಟದ ಪರಿಸ್ಥಿತಿ. ಈಗ ಭಾರತ ವಿಮಾನ ಪ್ರಾರಂಭಿಸುವ ಘೋಷಣೆ ಮಾಡಿದ ಕೂಡಲೇ ಎಲ್ಲರೂ ಹೇಗಾದರೂ ಒಮ್ಮೆ ಊರಿಗೆ ತಲುಪಿದರೆ ಸಾಕು ಎಂದು ಹೊರಟಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News