ದಮಾಮ್ ನಿಂದ ಅನಿವಾಸಿ ಕನ್ನಡಿಗರನ್ನುಮರಳಿ ಕರೆತರಲು ಕ್ವಾರಂಟೈನ್ ವ್ಯವಸ್ಥೆ ಆರಂಭಿಸಲು ಕೆ.ಎನ್.ಆರ್.ಐ ಆಗ್ರಹ

Update: 2020-05-09 17:29 GMT

ದಮಾಮ್: ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಅನಿವಾಸಿ ಕನ್ನಡಿಗರನ್ನು ಮರಳಿ ಕರೆತರವುದಕ್ಕಾಗಿ ಕ್ವಾರಂಟೈನ್ ಸೌಲಭ್ಯದ ಏರ್ಪಾಡು ಮಾಡಲು ದ.ಕ ಜಿಲ್ಲಾಡಳಿತ ಮತ್ತು ಕರ್ನಾಟಕ ಸರಕಾರ ವಿಫ಼ಲಗೊಂಡಿರುವುದು ನಿರಾಶದಾಯಕವಾಗಿದೆ. ಇದರಿಂದಾಗಿ ದಮಾಮ್- ಮಂಗಳೂರು ವಿಮಾನ ಸೇವೆ ಆರಂಭಗೊಳ್ಳಲು ವಿಳಂಬವಾಗುತ್ತಿದ್ದು, ಕೂಡಲೇ ಸರಕಾರ ಈ ಕುರಿತು ಗಂಭೀರವಾಗಿ ತೆಗೆದುಕೊಂಡು ಕೇರಳ ಮಾದರಿಯಲ್ಲಿ ಸರಳ ಕ್ವಾರಂಟೈನ್ ನೀತಿಯನ್ನು ಏರ್ಪಾಡುಗೊಳಿಸಬೇಕು ಎಂದು ಸೌದಿ ಅರೇಬಿಯಾದ ಅನಿವಾಸಿ ಸಂಘಟನೆಗಳ ಒಕ್ಕೂಟವಾಗಿರುವ ಕೆ.ಎನ್.ಆರ್.ಐ ಫ಼ಾರಂ ಆಗ್ರಹಿಸಿದೆ.

ಕರ್ನಾಟಕ ಅನಿವಾಸಿ ಸಂಘಟನೆಗಳ ಒಕ್ಕೂಟ (ಕೆ.ಎನ್.ಆರ್.ಐ ಫ಼ಾರಂ)ವು ಸೌದಿ ಅರೇಬಿಯಾದಲ್ಲಿರುವ ಕರ್ನಾಟಕದ ವಿವಿಧ ಅನಿವಾಸಿ ಕನ್ನಡಿಗ ಸಂಘಟನೆಗಳು ಸೇರಿಕೊಂಡು ಸ್ಥಾಪಿಸಿರುವ ಒಂದು ಒಕ್ಕೂಟವಾಗಿದ್ದು,  ಇಲ್ಲಿ ಸಮುದಾಯ ಅಭಿವೃಧಿ ಕಾರ್ಯ ಮತ್ತು  ಕಲ್ಯಾಣ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿದೆ. ಇದೀಗ ಕೋವಿಡ್ - 19 ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ನಮ್ಮ ಒಕ್ಕೂಟದ ಸದಸ್ಯರು ಅನಿವಾಸಿ ಕನ್ನಡಿಗರಿಗಾಗಿ ಆಹಾರ ಕಿಟ್ ವಿತರಣೆ, ವೈದ್ಯಕೀಯ ಸೇವೆ ಮತ್ತು ಇತರ ತುರ್ತು ಪರಿಹಾರ ಕಾರ್ಯಾಚರಣೆಗಳಲ್ಲಿ‌ ತೊಡಗಿಕೊಂಡಿದ್ದು. ಅಲ್ಲದೆ ಕೆ.ಎನ್.ಆರ್.ಐ ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿರುವ ಅನಿವಾಸಿಗಳ ನೆರವಿಗಾಗಿ ಸಹಾಯವಾಣಿಗಳನ್ನೂ ತೆರೆದಿದೆ. ಇದೀಗ ವಿದೇಶಾಂಗ ಸಚಿವಾಲಯವು ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿರುವ ಅನಿವಾಸಿಗಳನ್ನು ಮರಳಿ ಕರೆದೊಯ್ಯಲು ವಿಶೇಷ ವಿಮಾನದ ಏರ್ಪಾಡು ಮಾಡಿರುವುದು ಶ್ಲಾಘನೀಯ ಮತ್ತು ಸರಕಾರದ ಈ ನಡೆಯನ್ನು ಸ್ವಾಗತಿಸುತ್ತೇವೆ. ಆದರೆ ದ.ಕ ಜಿಲ್ಲೆಯಲ್ಲಿ ಕ್ವಾರಂಟೈನ್ ಸೌಲಭ್ಯದ ಏರ್ಪಾಡು ಇದುವರೆಗೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಸೌದಿ ಅರೇಬಿಯಾದ ಅನಿವಾಸಿ ಕನ್ನಡಿಗರನ್ನು ಕೊಂಡೊಯ್ಯುವ ಕಾರ್ಯ ಇನ್ನೂ ಆರಂಭವಾಗದಿರುವುದು ನಿರಾಶದಾಯಕವಾಗಿದೆ. ಇದುವರೆಗೆ ಕೆ.ಎನ್.ಆರ್.ಐ ಸಹಾಯವಾಣಿಗೆ ಬಂದ ಕರೆಗಳ‌ ಪ್ರಕಾರ ತಾಯ್ನಾಡಿಗೆ ಹೊರಟು ನಿಂತವರಲ್ಲಿ ಹೆಚ್ಚಿನ‌ವರು ವಿಸಿಟಿಂಗ್ ವಿಸಾದಲ್ಲಿ‌ ಬಂದು ಸಿಲುಕಿದವರು, ಗರ್ಭಿಣಿಯರು, ಕಾಯಿಲೆ ಪೀಡಿತರಾಗಿದ್ದು, ಇವರ ಪರಿಸ್ಥಿತಿ ಶೋಚನೀಯವಾಗಿದೆ. ಸರಕಾರ ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಿ, ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಅನಿವಾಸಿ ಕನ್ನಡಿಗರ ಕ್ವಾರಂಟೈನ್‌ ಏರ್ಪಾಡನ್ನು ತ್ವರಿತಗೊಳಿಸಬೇಕು. ರಾಜ್ಯ ಸರಕಾರ ಕೇರಳ ಮಾದರಿಯ ಸರಳ ಮತ್ತು ಸುಸಜ್ಜಿತವಾದ  ಕ್ವಾರಂಟೈನ್ ಸೌಲಭ್ಯವನ್ನು ಅನಿವಾಸಿ‌ ಕನ್ನಡಿಗರಿಗೆ ಒದಗಿಸಬೇಕು ಮತ್ತು ಈ ವಿಷಯದಲ್ಲಿ ಕೆರಳ ಮಾದರಿಯ ನೀತಿಯನ್ನು  ಒಳಗೊಳ್ಳಬೇಕು. ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಅನಿವಾಸಿ ಕನ್ನಡಿಗರು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಬರಲು ಏರ್ಪಾಡಗಳನ್ನು ಆರಂಭಿಸಬೇಕು ಎಂದು ಕೆ.ಎನ್.ಆರ್.ಐ ಫ಼ಾರಂ ಅಧ್ಯಕ್ಷ ಝಕರಿಯಾ ಜೋಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಕ್ಕೂಟವು ಈಗಾಗಲೇ ರಾಜ್ಯದ ಉಪ ಮುಖ್ಯಮಂತ್ರಿಗಳು, ಶಾಸಕರು ಮತ್ತು ಸಂಸದರಿಗೆ ಮನವಿಯನ್ನು ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News