ಕೊರೋನ ವಿರುದ್ಧದ ಹೋರಾಟ: 88 ಭಾರತೀಯ ವೈದ್ಯಕೀಯ ಸಿಬ್ಬಂದಿ ಯುಎಇಗೆ

Update: 2020-05-10 17:15 GMT
ಸಾಂದರ್ಭಿಕ ಚಿತ್ರ

ಅಬುಧಾಬಿ (ಯುಎಇ), ಮೇ 10: ಯುಎಇಯಲ್ಲಿ ನೋವೆಲ್-ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಅಲ್ಲಿನ ವೈದ್ಯರಿಗೆ ನೆರವಾಗುವುದಕ್ಕಾಗಿ ಭಾರತದ 88 ವೈದ್ಯಕೀಯ ಸಿಬ್ಬಂದಿಯ ಮೊದಲ ತಂಡ ದುಬೈ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ.

ಈ ನರ್ಸ್‌ಗಳು ವಿಶೇಷ ಫ್ಲೈದುಬೈ ವಿಮಾನದಲ್ಲಿ ಬೆಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದರು. ಅವರೆಲ್ಲರೂ ಕೇರಳ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿರುವ ಆ್ಯಸ್ಟರ್ ಡಿಎಮ್ ಹೆಲ್ತ್‌ಕೇರ್‌ಗೆ ಸೇರಿದ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದರು.

ದುಬೈ ವಿಮಾನ ನಿಲ್ದಾಣದಲ್ಲಿ ಅವರೆಲ್ಲರನ್ನೂ ಕೆಂಪು ಗುಲಾಬಿ ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಈ ನರ್ಸ್‌ಗಳ ಪೈಕಿ ಕೊಲ್ಹಾಪುರದ ದೀಪಿಕಾ ಸೂರಜ್ ಖವಾಲೆ ತನ್ನ ಎರಡು ವರ್ಷಗಳ ಮಗುವನ್ನು ಬಿಟ್ಟು ಬಂದವರು.

“ಭಾರತವನ್ನು ಬಿಟ್ಟು ಬರುವುದು ನನಗೆ ಸ್ವಲ್ಪ ಕಷ್ಟವಾಯಿತು. ಯಾಕೆಂದರೆ, ನನ್ನ ಎರಡು ವರ್ಷದ ಮಗುವನ್ನು ಬಿಟ್ಟು ಬರಬೇಕಾಗಿತ್ತು. ಈಗ ಮಗುವನ್ನು ಗಂಡ ಮತ್ತು ಅತ್ತೆ ನೋಡಿಕೊಳ್ಳುತ್ತಿದ್ದಾರೆ. ಯುಎಇಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದಕ್ಕಾಗಿ ಸಂತೋಷವಾಗಿದೆ” ಎಂದು ಅವರು ‘ಖಲೀಜ್ ಟೈಮ್ಸ್‌’ಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News