ಎನ್‌ಎಂಸಿ ಹೆಲ್ತ್‌ ನ ಮುಖ್ಯ ಹಣಕಾಸು ಅಧಿಕಾರಿ ಕುಟುಂಬ ಸಮೇತ ಭಾರತಕ್ಕೆ ಪಲಾಯನ: ವರದಿ

Update: 2020-05-10 18:07 GMT

ದುಬೈ, ಮೇ 10: ಭಾರೀ ಪ್ರಮಾಣದ ಹಣಕಾಸು ಅವ್ಯವಹಾರಗಳಿಗಾಗಿ ತನಿಖೆಯನ್ನು ಎದುರಿಸುತ್ತಿರುವ ಎನ್‌ಎಂಸಿ ಹೆಲ್ತ್‌ನ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಸುರೇಶ್ ಕೃಷ್ಣಮೂರ್ತಿ ಅಬುಧಾಬಿಯಿಂದ ಭಾರತಕ್ಕೆ ಮರಳಿದ್ದಾರೆ ಎಂದು khaleejtimes.com ರವಿವಾರ ವರದಿ ಮಾಡಿದೆ.

ಯುಎಇಯಲ್ಲಿ ಸಿಕ್ಕಿಹಾಕಿಕೊಂಡು ಸಂಕಷ್ಟ ಎದುರಿಸುತ್ತಿದ್ದ ಭಾರತೀಯರ ತೆರವಿಗಾಗಿ ನಿಯೋಜಿಸಲಾಗಿದ್ದ ಮೊದಲ ವಿಮಾನದಲ್ಲೇ ಅವರು ತನ್ನ ಪತ್ನಿ, ಮೂವರು ಮಕ್ಕಳು ಮತ್ತು ಮನೆಗೆಲಸದ ಮಹಿಳೆಯೊಂದಿಗೆ ಯುಎಇ ತೊರೆದಿದ್ದಾರೆ ಎಂದು ಕಂಪೆನಿಗೆ ನಿಕಟವಾಗಿರುವ ಮೂಲವೊಂದು ತಿಳಿಸಿದೆ ಎಂದು khaleejtimes.com ಹೇಳಿದೆ. ಅವರು ಮೇ 7ರಂದು ಏರ್ ಇಂಡಿಯ ಎಕ್ಸ್‌ಪ್ರೆಸ್ ವಿಮಾನದಲ್ಲಿ ಕೇರಳದ ಕೊಚ್ಚಿಗೆ ಪ್ರಯಾಣಿಸಿದ್ದಾರೆ ಎನ್ನಲಾಗಿದೆ.

ಅಬುಧಾಬಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಬಿ. ಆರ್. ಶೆಟ್ಟಿ ಒಡೆತನದ ಎನ್‌ಎಂಸಿ ಹೆಲ್ತ್ ಕಂಪೆನಿಯು ಬ್ಯಾಂಕ್‌ಗಳಿಗೆ ತಪ್ಪು ಮಾಹಿತಿಗಳನ್ನು ನೀಡಿ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಗಾಧ ಪ್ರಮಾಣದ ಸಾಲ ಪಡೆದು ವಂಚಿಸಿದೆ ಎಂದು ಆರೋಪಿಸಲಾಗಿದೆ. ಈ ಆರೋಪಗಳ ಹಿನ್ನೆಲೆಯಲ್ಲಿ ಲಂಡನ್ ಹೈಕೋರ್ಟ್ ಕಂಪೆನಿಯ ಆಡಳಿತವನ್ನು ಆಡಳಿತಗಾರರ ಸುಪರ್ದಿಗೆ ಒಪ್ಪಿಸಿದೆ.

360ಕ್ಕೂ ಅಧಿಕ ಭಾರತೀಯರೊಂದಿಗೆ ಕೃಷ್ಣಮೂರ್ತಿ ಮತ್ತು ಅವರ ಕುಟುಂಬದ ತೆರವು ಕಾರ್ಯಾಚರಣೆಯಲ್ಲಿ ಅನುಸರಿಸಲಾಗಿರುವ ನಿಯಮಗಳು, ಪಾರದರ್ಶಕತೆ ಮತ್ತು ಆದ್ಯತೆಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದೆ. ಅತ್ಯಂತ ಹೆಚ್ಚು ಸಂಕಷ್ಟದ ಪರಿಸ್ಥಿತಿಯಲ್ಲಿರುವವರಿಗೆ ತೆರವು ಕಾರ್ಯಾಚರಣೆಯಲ್ಲಿ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಲಾಗಿತ್ತು.

“ತುರ್ತು ಕಾರಣಗಳಿಗಾಗಿ ನಾನು ಭಾರತಕ್ಕೆ ವಾಪಸಾದೆ ಎಂಬುದಾಗಿ ಶುಕ್ರವಾರ ಬೆಳಗ್ಗೆ (ಮೊದಲ ವಿಮಾನ ಹಾರಿದ ಮರುದಿನ) ಅವರು ಕೇರಳದಿಂದ ಸಂದೇಶ ಕಳುಹಿಸಿದರು. ನಾನು ಜೂನ್‌ನಲ್ಲಿ ಯುಎಇಗೆ ಮರಳುತ್ತೇನೆ ಎಂದು ಅವರು ಹೇಳಿದರು. ಅವರು ತನ್ನ ಇಡೀ ಕುಟುಂಬದೊಂದಿಗೆ ಯುಎಇಯಿಂದ ಹೊರಟಿದ್ದಾರೆ” ಎಂದು ಕಂಪೆನಿಯ ಮೂಲವೊಂದು ತಿಳಿಸಿದೆ.

ಕಂಪೆನಿ ನಡೆಸಿದೆ ಎನ್ನಲಾದ ಅವ್ಯವಹಾರಗಳ ಹಿನ್ನೆಲೆಯಲ್ಲಿ ಕಾನೂನು ಕ್ರಮಕ್ಕೆ ಹೆದರಿ ಅವರು ಪರಾರಿಯಾಗಿರಬಹುದು ಎಂದು ಇನ್ನೊಂದು ಮೂಲ ತಿಳಿಸಿದೆ.

ಅವರ ಕುಟುಂಬ ಈಗ ಆಲಪ್ಪುಳದಲ್ಲಿರುವ ಅವರ ಮನೆಯಲ್ಲಿದೆ. ಹಿರಿಯ ಮಗ ಸರಕಾರಿ ಕ್ವಾರಂಟೈನ್‌ನಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News