ಯುದ್ಧಾಭ್ಯಾಸದ ವೇಳೆ ಇರಾನ್ ಯುದ್ಧನೌಕೆಗೆ ಬಡಿದ ಕ್ಷಿಪಣಿ: 19 ಸೈನಿಕರ ಸಾವು

Update: 2020-05-11 17:24 GMT

ಟೆಹರಾನ್, ಮೇ 11: ಇರಾನ್ ನೌಕಾಪಡೆ ರವಿವಾರ ನಡೆಸಿದ ಯುದ್ಧಾಭ್ಯಾಸದ ವೇಳೆ, ಅದರ ಯುದ್ಧನೌಕೆಯೊಂದಕ್ಕೆ ಅದರದೇ ಕ್ಷಿಪಣಿಯೊಂದು ಬಡಿದು 19 ನೌಕಾ ಪಡೆ ಸೈನಿಕರು ಮೃತಪಟ್ಟಿದ್ದಾರೆ ಎಂದು ಸರಕಾರಿ ಮಾಧ್ಯಮ ಸೋಮವಾರ ವರದಿ ಮಾಡಿದೆ.

ಇರಾನ್‌ನ ದಕ್ಷಿಣ ಕರಾವಳಿಯ ಸಮುದ್ರದಲ್ಲಿರುವ ಬಂದರೆ-ಜಸ್ಕ್ ಸಮೀಪ ಈ ಘಟನೆ ಸಂಭವಿಸಿದೆ ಎಂದು ಸರಕಾರಿ ಟೆಲಿವಿಶನ್ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಯುದ್ಧಾಭ್ಯಾಸದ ವೇಳೆ ನಿರ್ದಿಷ್ಟ ಗುರಿಯ ಮೇಲೆ ದಾಳಿ ನಡೆಸುವ ಕಸರತ್ತಿನ ಅಭ್ಯಾಸ ನಡೆಸಲಾಗುತ್ತಿತ್ತು. ಗುರಿಯನ್ನು ನಿರ್ದಿಷ್ಟ ಸ್ಥಳದಲ್ಲಿ ಇರಿಸಲು ಯುದ್ಧನೌಕೆ ಕೊನಾರಕ್ ಹೋಗಿತ್ತು. ಆದರೆ, ಗುರಿಯನ್ನು ಇಟ್ಟು ಯುದ್ಧನೌಕೆಯು ಸುರಕ್ಷಿತ ಅಂತರಕ್ಕೆ ಮರಳುವ ಮುನ್ನವೇ ಇನ್ನೊಂದು ಯುದ್ಧನೌಕೆಯಿಂದ ಗುರಿಯತ್ತ ಕ್ಷಿಪಣಿ ಹಾರಿಸಲಾಗಿತ್ತು. ಕ್ಷಿಪಣಿಯ ಹೊಡೆತಕ್ಕೆ ಯುದ್ಧನೌಕೆಯು ಧ್ವಂಸಗೊಂಡಿದೆ ಎಂದು ಸರಕಾರಿ ಟಿವಿ ಚಾನೆಲ್ ಹೇಳಿದೆ.

19 ನೌಕಾ ಸಿಬ್ಬಂದಿ ಮೃತಪಟ್ಟಿದ್ದಾರೆ ಹಾಗೂ 15 ಮಂದಿ ಗಾಯಗೊಂಡಿದ್ದಾರೆ ಎಂದು ಸೇನೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ. ಆದರೆ ಅದು ಹೆಚ್ಚಿನ ವಿವರಣೆಯನ್ನು ನೀಡಿಲ್ಲ.

ತಾಂತ್ರಿಕ ತನಿಖೆಗಾಗಿ ಯುದ್ಧನೌಕೆಯ ಅವಶೇಷಗಳನ್ನು ತೀರಕ್ಕೆ ಎಳೆಯಲಾಗಿದೆ ಎಂದು ಸೇನೆ ತಿಳಿಸಿದೆ. ಹೆಚ್ಚಿನ ಮಾಹಿತಿಗಳನ್ನು ಬಿಡುಗಡೆ ಮಾಡುವವರೆಗೆ ಊಹಾಪೋಹಗಳಲ್ಲಿ ತೊಡಗಬಾರದು ಎಂಬುದಾಗಿ ಜನರಿಗೆ ಅದು ಮನವಿ ಮಾಡಿದೆ.

ಪರ್ಸಿಯನ್ ಕೊಲ್ಲಿ ಜಲಪ್ರದೇಶದಲ್ಲಿ ನಡೆದ ಸಮರಾಭ್ಯಾಸದ ವೇಳೆ, ಜಮಾರನ್ ಎಂಬ ಇನ್ನೊಂದು ಯುದ್ಧ ನೌಕೆಯಿಂದ ಹಾರಿದ ಕ್ಷಿಪಣಿಯು ಕೊನಾರಕ್‌ಗೆ ತಪ್ಪಾಗಿ ಬಡಿಯಿತು ಎಂದು ತಸ್ನಿಮ್ ಸುದ್ದಿ ಸಂಸ್ಥೆಯು ಟ್ವೀಟ್‌ನಲ್ಲಿ ಹೇಳಿದೆ.

ಗಾಯಗೊಂಡಿರುವ 15 ಮಂದಿಯನ್ನು ಸಿಸ್ತಾನ್ ಮತ್ತು ಬಲೂಚಿಸ್ತಾನ್‌ನ ಆಸ್ಪತ್ರೆಗಳಿಗೆ ಸೇರಿಸಲಾಗಿದೆ ಎಂದು ಆಸ್ಪತ್ರೆಯೊಂದರ ಅಧಿಕಾರಿಯೊಬ್ಬರು ತಿಳಿಸಿದರು. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಇತ್ತೀಚಿನ ದಿನಗಳಲ್ಲಿ ತಾರಕಕ್ಕೇರಿರುವ ನುಡುವೆಯೇ ಈ ಘಟನೆ ಸಂಭವಿಸಿದೆ.

ತಪ್ಪಾಗಿ ಯುಕ್ರೇನ್ ಪ್ರಯಾಣಿಕ ವಿಮಾನವನ್ನು ಉರುಳಿಸಿದ್ದ ಇರಾನ್

ಜನವರಿಯಲ್ಲಿ ಇರಾನ್ ರಾಜಧಾನಿ ಟೆಹರಾನ್‌ನಿಂದ ಯುಕ್ರೇನ್ ರಾಜಧಾನಿ ಕೀವ್‌ಗೆ ಹೊರಟಿದ್ದ ಯುಕ್ರೇನ್‌ನ ಪ್ರಯಾಣಿಕ ವಿಮಾನವೊಂದನ್ನು ಇರಾನ್ ಸೇನೆಯು ತಪ್ಪಾಗಿ ಹೊಡೆದುರುಳಿಸಿತ್ತು. ಆ ಘಟನೆಯಲ್ಲಿ ವಿಮಾನದಲ್ಲಿದ್ದ ಎಲ್ಲ 176 ಮಂದಿ ಮೃತಪಟ್ಟಿದ್ದಾರೆ.

ಆ ಸಂದರ್ಭದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತಾರಕಕ್ಕೇರಿತ್ತು. ಇರಾಕ್‌ನಲ್ಲಿರುವ ಅಮೆರಿಕದ ಸೈನಿಕರ ನೆಲೆಗಳ ಮೇಲೆ ಹಲವು ಸುತ್ತು ಕ್ಷಿಪಣಿ ದಾಳಿಗಳನ್ನು ಇರಾನ್ ನಡೆಸಿತ್ತು.

ಈ ಹಿನ್ನೆಲೆಯಲ್ಲಿ, ಟೆಹರಾನ್‌ನಿಂದ ಹೊರಟ ಪ್ರಯಾಣಿಕ ವಿಮಾನ ನಗರದ ಹೊರವಲಯದಲ್ಲಿದ್ದಾಗ ಶತ್ರು ವಿಮಾನವೆಂದು ಭಾವಿಸಿದ ಇರಾನ್ ಸೇನೆಯು ವಿಮಾನವನ್ನು ಹೊಡೆದುರುಳಿಸಿತ್ತು. ಮೊದಲು ತನಗೆ ಏನೂ ಗೊತ್ತಿಲ್ಲವೆಂಬಂತೆ ಇರಾನ್ ನಟಿಸಿದರೂ, ಅಂತರ್‌ರಾಷ್ಟ್ರೀಯ ಒತ್ತಡ ಹೆಚ್ಚಾದಾಗ ತನ್ನ ತಪ್ಪನ್ನು ಒಪ್ಪಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News