ಸೌದಿ ಅರೇಬಿಯದ ಅನಿವಾಸಿ ಕನ್ನಡಿಗರಿಗೆ ವಿಶೇಷ ವಿಮಾನ ಯಾನ ಪ್ರಾರಂಭಿಸಲು ಆಗ್ರಹ

Update: 2020-05-13 10:15 GMT

ದಮಾಮ್ /ಜುಬೈಲ್, ಮೇ 13: ಸೌದಿ ಅರೇಬಿಯಾದಲ್ಲಿ ಕೊರೋನ ಲಾಕ್ಡೌನ್ ಸಂಕಷಷ್ಟಕ್ಕೆ ಸಿಲುಕಿರುವ ಅನಿವಾಸಿ ಕನ್ನಡಿಗರನ್ನು ತಾಯ್ನಾಡಿಗೆ ಕರೆತರಲು ವಿಶೇಷ ವಿಮಾನದ ವ್ಯವಸ್ಥೆ ಕಲ್ಪಿಸುವಂತೆ ಅನಿವಾಸಿ ಭಾರತೀಯ ಮಲೆನಾಡಿಗರ ಸಂಘಟನೆ ಸೌದಿ ಅರೇಬಿಯಾದ ಮಲ್ನಾಡ್ ಗಲ್ಫ್ ಅಸೋಸಿಯೇಶನ್ ಕರ್ನಾಟಕ ರಾಜ್ಯ ಸಚಿವ ಸಿ.ಟಿ.ರವಿಗೆ ಮನವಿ ಮಾಡಿದೆ.

ಮಲ್ನಾಡ್ ಗಲ್ಫ್ ಅಸೋಸಿಯೇಶನ್ ಅಧ್ಯಕ್ಷ ಶರೀಫ್ ಕಳಸ ನೇತೃತ್ವದಲ್ಲಿ ಸಚಿವ ಸಿ.ಟಿ.ರವಿಯವರೊಂದಿಗೆ ಟೆಲಿ ಕಾನ್ಫರೆನ್ಸ್ ಮೂಲಕ ಮಾತನಾಡಿ, ಕೋವಿಡ್ -19 ರ ಸನ್ನಿವೇಶದಿಂದಾಗಿ ಉಂಟಾಗಿರುವ ಸಮಸ್ಯೆಗೆ ಈ ವರೆಗೂ ಕರ್ನಾಟಕಕ್ಕೆ ವಿಶೇಷ ವಿಮಾನದ ವ್ಯವಸ್ಥೆ ಮಾಡದೇ ಇರುವ ಬಗ್ಗೆ ಪ್ರಸ್ತಾಪಿಸಲಾಯಿತು. ಹೆಚ್ಚು ಸಂಖ್ಯೆಯಲ್ಲಿ ಕೆಲಸ ಕಳೆದುಕೊಂಡು ಊರಿನತ್ತ ಪ್ರಯಾಣಿಸಲು ಕಾಯುತ್ತಿರುವ ಅನಿವಾಸಿ ಕನ್ನಡಿಗರು ಮತ್ತು ವಿಸಿಟ್ ವೀಸಾ, ಪ್ರವಾಸಿ ವೀಸಾದಲ್ಲಿ ಬಂದು ಕಾಲಾವಧಿ ಮುಗಿದು ಸಿಲುಕಿರುವ ಹಿರಿಯ ನಾಗರಿಕರು, ಗರ್ಭಿಣಿಯರು, ವೇತನವಿಲ್ಲದೆ ಪರದಾಡುತ್ತಿರುವವರು, ರೋಗಿಗಳು ಎಲ್ಲರಿಗೂ ಉಪಯೋಗವಾಗಲು ಆದಷ್ಟು ಬೇಗ ಈ ಸೇವೆಯನ್ನು ಪ್ರಾರಂಭಿಸುವಂತೆ ಸಚಿವರಲ್ಲಿ ಮನವಿ ಮಾಡಲಾಯಿತು ಎಂದು ಪ್ರಕಟನೆ ತಿಳಿಸಿದೆ.

ಸಚಿವ ಸಿಟಿ. ರವಿ ಇದಕ್ಕೆ ಪೂರಕವಾಗಿ ಸ್ಪಂದಿಸಿ, ಆದಷ್ಟು ಬೇಗ ಇದರ ಉಸ್ತುವಾರಿಗಳಾದ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಹಾಗೂ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ.

ಟೆಲಿಕಾನ್ಫರೆನ್ಸ್ ಸಭೆಯಲ್ಲಿ ಕೆ.ಎನ್.ಆರ್.ಐ. ಫೋರಂನ ಅಧ್ಯಕ್ಷರೂ ,ಹಿರಿಯ ಮುಖಂಡರೂ ಆದ ಝಕರಿಯಾ ಹಾಜಿ ಅಲ್ ಮುಝೈನ್, ಫಾರೂಕ್ ಪೋರ್ಟ್ ಫೋಲಿಯೋ, ಮಲ್ನಾಡ್ ಗಲ್ಫ್ ನ  ಜುಬೈಲ್ ಘಟಕದ ಗೌರವಾಧ್ಯಕ್ಷ ಫಾರೂಕ್ ಅರಬ್ ಎನರ್ಜಿ, ಅಂತಾರಾಷ್ಟ್ರೀಯ ಸಂಯೋಜಕ ಅಬ್ದುಲ್ ಸತ್ತಾರ್ ಕ್ಲೌಡ್ ಸೆವೆನ್ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು .

ಮಲ್ನಾಡ್ ಗಲ್ಫ್ ಅಸೋಸಿಯೇಶನ್ ಈಗಾಗಲೇ ಸೌದಿ ಅರೇಬಿಯದ ಎಲ್ಲ ಭಾಗಗಳಲ್ಲೂ ಇದಕ್ಕಾಗಿ ಕೋವಿಡ್ -19 ಹೆಲ್ಪ್ ಲೈನ್ https://malnadgulf.com/covid19-HELPDESK/ ನ್ನು ಒದಗಿಸಿದ್ದು, ಭಾರತೀಯ ರಾಯಭಾರಿಯ ಕಚೇರಿಯ ವೆಬ್ಸೈಟ್ ನಲ್ಲಿ ಹೆಸರುಗಳನ್ನು ಮತ್ತು ಅವರ ವಿವರಗಳನ್ನು ನಮೂದಿಸಲು ಸಹಾಯಮಾಡುತ್ತಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News