ಯುಎಇ: ಉಲ್ಲಂಘಕರಿಗೆ ದೇಶ ತೊರೆಯಲು 3 ತಿಂಗಳ ವಿನಾಯಿತಿ ಅವಧಿ

Update: 2020-05-20 14:16 GMT

ಅಬುಧಾಬಿ (ಯುಎಇ), ಮೇ 20: ವಾಸ್ತವ್ಯ ಕಾನೂನನ್ನು ಉಲ್ಲಂಘಿಸಿ ಯುಎಇಯಲ್ಲಿ ನೆಲೆಸಿರುವ ವಿದೇಶೀಯರು ದೇಶವನ್ನು ತೊರೆಯಲು ಮೇ 18ರಿಂದ ಮೂರು ತಿಂಗಳ ವಿನಾಯಿತಿ ಅವಧಿಯನ್ನು ಒದಗಿಸಲಾಗಿದೆ ಎಂದು ಮಂಗಳವಾರ ಘೋಷಿಸಲಾಗಿದೆ.

ವಾಸ್ತವ್ಯ ವೀಸಾಗಳ ಅವಧಿ ಮೀರಿ ವಾಸಿಸಿರುವ ನಿವಾಸಿಗಳಿಗೆ ಹಾಗೂ ಸಂದರ್ಶನ ವೀಸಾಗಳ ಅವಧಿ ಮೀರಿ ನೆಲೆಸಿರುವ ಸಂದರ್ಶಕರಿಗೆ ಈ ವಿನಾಯಿತಿ ಅವಧಿ ಅನ್ವಯವಾಗುತ್ತದೆ. ಅದೇ ವೇಳೆ, ಅವರಿಗೆ ದಂಡದಿಂದಲೂ ವಿನಾಯಿತಿ ನೀಡಲಾಗುತ್ತದೆ ಎಂದು ಯುಎಇಯ ವಿದೇಶ ವ್ಯವಹಾರಗಳ ಸಚಿವಾಲಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ.

ಕೊರೋನ ವೈರಸ್ ಬೀಗಮುದ್ರೆಯ ಹಿನ್ನೆಲೆಯಲ್ಲಿ ಜನರ ಸಂಚಾರಕ್ಕೆ ಕಷ್ಟವಾಗಿತ್ತು. ಹಾಗಾಗಿ ತಮ್ಮ ವಾಸ್ತವ್ಯ ವೀಸಾಗಳನ್ನು ನವೀಕರಿಸಲು ಜನರಿಗೆ ಸಾಧ್ಯವಾಗಿರಲಿಲ್ಲ. ಹಾಗಾಗಿ ಎಲ್ಲ ವಾಸ್ತವ್ಯ ಮತ್ತು ಸಂದರ್ಶನ ವೀಸಾಗಳ ಉಲ್ಲಂಘಕರಿಗೆ ದಂಡನೆಯಿಂದ ವಿನಾಯಿತಿ ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆದರೆ, ಅವರು ಯುಎಇ ತೊರೆದು ತಮ್ಮ ದೇಶಕೆ ವಾಪಸಾಗಬೇಕು ಎಂದು ವಿದೇಶ ವ್ಯವಹಾರಗಳು ಮತ್ತು ಬಂದರುಗಳ ಮಹಾನಿರ್ದೇಶಕ ಮೇಜರ್ ಜನರಲ್ ಸಯೀದ್ ರಕನ್ ಅಲ್ ರಶೀದಿ ಹೇಳಿದರು.

ಆದರೆ, ಯುಎಇಯಲ್ಲೇ ಉಳಿದು ತಮ್ಮ ಸ್ಥಾನಮಾನ ತಿದ್ದುಪಡಿ ಮಾಡುವವರಿಗೆ ಈ ವಿನಾಯಿತಿ ಅನ್ವಯವಾಗುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News