ಕೊರೋನ ವಿರುದ್ಧದ ಹೋರಾಟ: ಚಿಕಿತ್ಸೆಗಾಗಿ ಯುಎಇಗೆ ಬಂದಿಳಿದ 105 ಭಾರತೀಯ ವೈದ್ಯ ಸಿಬ್ಬಂದಿ

Update: 2020-05-20 14:32 GMT

ಅಬುಧಾಬಿ (ಯುಎಇ), ಮೇ 20: ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಯುಎಇಗೆ ಹೊರಟಿರುವ ಭಾರತದ 105 ವೈದ್ಯಕೀಯ ವೃತ್ತಿಪರರ ತಂಡವೊಂದು ಬುಧವಾರ ಅಬುಧಾಬಿಯಲ್ಲಿ ಇಳಿದಿದೆ.

ಯುಎಇಯ ವಿಪಿಎಸ್ ಹೆಲ್ತ್‌ಕೇರ್ ಸಂಸ್ಥೆಯು, ನರ್ಸ್‌ಗಳು, ವೈದ್ಯರು ಮತ್ತು ಪ್ಯಾರಾಮೆಡಿಕ್‌ಗಳ ತಂಡವನ್ನು ಎತಿಹಾದ್ ಏರ್‌ವೇಸ್‌ನ ವಿಶೇಷ ವಿಮಾನವೊಂದರಲ್ಲಿ ಅಬುಧಾಬಿಗೆ ಕರೆತಂದಿದೆ.

ಕೊಚ್ಚಿಯಿಂದ ಬಂದ ಎತಿಹಾದ್ ಏರ್‌ವೇಸ್ ವಿಮಾನವು ಬೆಳಗ್ಗೆ 6:54ಕ್ಕೆ ಅಬುಧಾಬಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಭಾರತ ಮತ್ತು ಯುಎಇಯ ಧ್ವಜಗಳನ್ನು ಹಿಡಿದುಕೊಂಡ ವೈದ್ಯಕೀಯ ಸಿಬ್ಬಂದಿ ವಿಮಾನ ನಿಲ್ದಾಣದಿಂದ ಹೊರಬಂದರು.

ಕೊರೋನ ವೈರಸ್ ವಿರುದ್ಧದ ಹೋರಾಟವನ್ನು ಯುಎಇ ತೀವ್ರಗೊಳಿಸಿರುವಂತೆಯೇ, ಈ ವೈದ್ಯಕೀಯ ಸಿಬ್ಬಂದಿ ದೇಶದ ವಿವಿಧ ಕೋವಿಡ್-19 ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ ಕೆಲಸ ಮಾಡಲಿದ್ದಾರೆ.

ಇದು ಯುಎಇಗೆ ಆಗಮಿಸಿದ ಭಾರತೀಯ ವೈದ್ಯಕೀಯ ವೃತ್ತಿಪರರ ಎರಡನೇ ತಂಡವಾಗಿದೆ. 88 ಸಿಬ್ಬಂದಿಯನ್ನೊಳಗೊಂಡ ಮೊದಲ ಭಾರತೀಯ ತಂಡ ಕಳೆದ ವಾರ ಯುಎಇಗೆ ಆಗಮಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News