‘ನಮ್ಮ ತಂದೆಯ ಹಂತಕರನ್ನು ಕ್ಷಮಿಸಿದ್ದೇವೆ’: ಜಮಾಲ್ ಖಶೋಗಿ ಪುತ್ರರು

Update: 2020-05-22 16:46 GMT

ರಿಯಾದ್ (ಸೌದಿ ಅರೇಬಿಯ), ಮೇ 22: “ನಮ್ಮ ತಂದೆಯ ಹಂತಕರನ್ನು ನಾವು ಕ್ಷಮಿಸಿದ್ದೇವೆ” ಎಂದು ಕೊಲೆಯಾಗಿರುವ ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿಯ ಪುತ್ರರು ಶುಕ್ರವಾರ ಹೇಳಿದ್ದಾರೆ.

“ನಮ್ಮ ತಂದೆಯನ್ನು ಕೊಂದವರನ್ನು ನಾವು ಕ್ಷಮಿಸಿದ್ದೇವೆ ಎಂದು ಹುತಾತ್ಮ ಜಮಾಲ್ ಖಶೋಗಿಯ ಪುತ್ರರಾದ ನಾವು ಘೋಷಿಸುತ್ತೇವೆ” ಎಂದು ಸಲಾಹ್ ಖಶೋಗಿ ಟ್ವಿಟರ್‌ನಲ್ಲಿ ಹೇಳಿದ್ದಾರೆ.

ಸೌದಿ ಅರೇಬಿಯದಲ್ಲಿ ವಾಸಿಸುತ್ತಿರುವ ಸಲಾಹ್ ಮಾಡಿರುವ ಘೋಷಣೆಯ ಕಾನೂನು ಪರಿಣಾಮಗಳ ಬಗ್ಗೆ ತಕ್ಷಣಕ್ಕೆ ಗೊತ್ತಾಗಿಲ್ಲ.

ಆರಂಭದಲ್ಲಿ ಸೌದಿ ಅರೇಬಿಯದ ರಾಜ ಕುಟುಂಬದ ಒಡನಾಡಿಯಾಗಿದ್ದ ಖಶೋಗಿ, ದೇಶದ ಅಧಿಕಾರ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ಗೆ ಹೋದ ಬಳಿಕ ರಾಜಸತ್ತೆಯ ಟೀಕಾಕಾರರಾಗಿ ಪರಿವರ್ತನೆಯಾಗಿದ್ದರು. ಅವರನ್ನು 2018 ಅಕ್ಟೋಬರ್ 2ರಂದು ಟರ್ಕಿ ದೇಶದ ಇಸ್ತಾಂಬುಲ್ ನಗರದಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ಕೊಂದು ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ವಿಲೇವಾರಿ ಮಾಡಲಾಗಿತ್ತು. ಈ ಘಟನೆಯ ಬಗ್ಗೆ ಅಂದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಸೌದಿ ಅರೇಬಿದಯ ರಾಜಸತ್ತೆಯೊಂದಿಗೆ ಮುನಿಸಿಕೊಂಡ ಬಳಿಕ ಖಶೋಗಿ ಅಮೆರಿಕಕಕೆ ಪಲಾಯನಗೈದು, ವಾಶಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ಅಂಕಣಗಳನ್ನು ಬರೆಯುತ್ತಿದ್ದರು.

ಟರ್ಕಿಯ ಅವರ ಪ್ರೇಯಸಿಯೊಂದಿಗೆ ಮದುವೆಯಾಗಲು ಸಾಧ್ಯವಾಗುವಂತೆ ದಾಖಲೆ ಪತ್ರಗಳನ್ನು ಪಡೆಯಲು ಅವರನ್ನು ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಗೆ ಬರಲು ತಿಳಿಸಲಾಗಿತ್ತು. ಅದರಂತೆ 2018 ಅಕ್ಟೋಬರ್ 2ರಂದು ಕೌನ್ಸುಲೇಟ್ ಕಚೇರಿಗೆ ಕಾಲಿಟ್ಟ ಅವರನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿತ್ತು.

ಹಲವು ದಿನಗಳ ಬಳಿಕ, ಅವರ ಹತ್ಯೆಯನ್ನು ಸೌದಿ ಅರೇಬಿಯವು ಒಪ್ಪಿಕೊಂಡಿತಾದರೂ, ಅವರ ಮೃತದೇಹ ಮಾತ್ರ ಸಿಗಲಿಲ್ಲ.

ಖಶೋಗಿಯನ್ನು ಕೊಲ್ಲುವ ಉದ್ದೇಶದಿಂದ ಸೌದಿ ಅರೇಬಿಯದಿಂದ ವಿಶೇಷ ವಿಮಾನದಲ್ಲಿ 15 ಗುಪ್ತಚರ ಏಜಂಟ್‌ಗಳ ತಂಡವು ಇಸ್ತಾಂಬುಲ್‌ಗೆ ಬಂದಿತ್ತು ಎಂದು ಟರ್ಕಿ ಹೇಳಿದೆ.

ಐವರು ಆರೋಪಿಗಳಿಗೆ ಮರಣದಂಡನೆ

ಅಂತರ್‌ರಾಷ್ಟ್ರೀಯ ಒತ್ತಡಕ್ಕೆ ಮಣಿದ ಸೌದಿ ಅರೇಬಿಯವು ಖಶೋಗಿ ಹತ್ಯೆ ಬಗ್ಗೆ ತನಿಖೆ ನಡೆಸುವುದಾಗಿ ಘೋಷಿಸಿತು. 11 ಮಂದಿಯ ವಿರುದ್ಧ ಮೊಕದ್ದಮೆ ಹೂಡಿತು. ಬಳಿಕ ನ್ಯಾಯಾಲಯವು ಈ ಪೈಕಿ ಐವರಿಗೆ ಮರಣ ದಂಡನೆ ವಿಧಿಸಿತು ಹಾಗೂ ಮೂವರಿಗೆ ಒಟ್ಟು 24 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಮೂವರನ್ನು ಆರೋಪಗಳಿಂದ ಖುಲಾಸೆಗೊಳಿಸಲಾಗಿದೆ ಎಂದು ಸೌದಿ ಅರೇಬಿಯದ ಪಬ್ಲಿಕ್ ಪ್ರಾಸಿಕ್ಯೂಟರ್ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪ್ರಕಟಿಸಿದ್ದಾರೆ.

ಹತ್ಯೆಯ ವಿರುದ್ಧ ಪ್ರತಿಭಟಿಸಿದವರನ್ನು ಟೀಕಿಸಿದ್ದ ಖಶೋಗಿ ಪುತ್ರ

ಸೌದಿ ಅರೇಬಿಯದ ನ್ಯಾಯಾಂಗ ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ವಿಶ್ವಾಸವಿದೆ ಎಂದು ಜಮಾಲ್ ಖಶೋಗಿಯ ಪುತ್ರ ಸಲಾಹ್ ಈ ಹಿಂದೆಯೂ ಹೇಳಿದ್ದರು. ಅದೂ ಅಲ್ಲದೆ, ಹತ್ಯೆಯ ವಿರುದ್ಧ ಗಟ್ಟಿ ಸ್ವರದಲ್ಲಿ ಧ್ವನಿ ಎತ್ತಿದ್ದವರನ್ನು ಟೀಕಿಸಿದ್ದ ಸಲಾಹ್, ಅವರು (ಪ್ರತಿಭಟಿಸಿದವರು) ಪ್ರಕರಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು.

ಮಕ್ಕಳಿಗೆ ಬಂಗಲೆ, ಪ್ರತಿ ತಿಂಗಳು ಸಾವಿರಾರು ಡಾಲರ್ : ವಾಶಿಂಗ್ಟನ್ ಪೋಸ್ಟ್ ವರದಿ

ಸಲಾಹ್ ಸೇರಿದಂತೆ ಖಶೋಗಿಯ ಮಕ್ಕಳಿಗೆ ಸೌದಿ ಅರೇಬಿಯವು ಕೋಟಿಗಟ್ಟಳೆ ಮೌಲ್ಯದ ಬಂಗಲೆಗಳನ್ನು ಕೊಟ್ಟಿದೆ ಹಾಗೂ ಅವರಿಗೆ ಅಧಿಕಾರಿಗಳು ಪ್ರತಿ ತಿಂಗಳು ಸಾವಿರಾರು ಡಾಲರ್ (ಲಕ್ಷಾಂತರ ರೂಪಾಯಿ)ಗಳನ್ನು ನೀಡುತ್ತಿದ್ದಾರೆ ಎಂದು ವಾಶಿಂಗ್ಟನ್ ಪೋಸ್ಟ್ ಎಪ್ರಿಲ್‌ನಲ್ಲಿ ವರದಿ ಮಾಡಿದೆ.

ಆದರೆ, ಈ ವರದಿಯನ್ನು ಸಲಾಹ್ ನಿರಾಕರಿಸಿದ್ದಾರೆ. ಸೌದಿ ಅರೇಬಿಯದೊಂದಿಗೆ ಯಾವುದೇ ಹಣಕಾಸು ಪರಿಹಾರದ ಬಗ್ಗೆ ಚರ್ಚಿಸಿಲ್ಲ ಎಂದು ಹೇಳಿದ್ದಾರೆ.

ಹತ್ಯೆಯ ಹಿಂದೆ ಯುವರಾಜ: ಸಿಐಎ, ವಿಶ್ವಸಂಸ್ಥೆ

ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆಯ ಹಿಂದೆ ದೇಶದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಇದ್ದಾರೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಹೇಳಿದೆ. ಇದೇ ನಿಲುವನ್ನು ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಯೂ ವ್ಯಕ್ತಪಡಿಸಿದ್ದಾರೆ.

ಆದರೆ, ಸೌದಿ ಅರೇಬಿಯ ಈ ಆರೋಪವನ್ನು ನಿರಾಕರಿಸಿದೆ.

ಖಶೋಗಿ ಹಂತಕರನ್ನು ಕ್ಷಮಿಸುವ ಅಧಿಕಾರ ಯಾರಿಗೂ ಇಲ್ಲ: ಗೆಳತಿ

ಜಮಾಲ್ ಖಶೋಗಿಯ ಹಂತಕರನ್ನು ಕ್ಷಮಿಸುವ ಅಧಿಕಾರ ಯಾರಿಗೂ ಇಲ್ಲ ಎಂದು ಅವರ ಟರ್ಕಿಯ ಗೆಳತಿ ಹಾತಿಸ್ ಸೆಂಗಿಝ್ ಹೇಳಿದ್ದಾರೆ. ಸೆಂಗಿಝ್‌ರನ್ನು ಮದುವೆಯಾಗುವುದಕ್ಕಾಗಿ ದಾಖಲೆ ಪತ್ರಗಳನ್ನು ತರಲು ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಗೆ ಹೋಗಿದ್ದಾಗ ಖಶೋಗಿಯನ್ನು ಬರ್ಬರವಾಗಿ ಕೊಲ್ಲಲಾಗಿತ್ತು.

“ಅವರನ್ನು ಹೊಂಚು ಹಾಕಿ ಕೊಲೆ ಮಾಡಲಾಗಿದೆ. ಅವರ ಹಂತಕರನ್ನು ಕ್ಷಮಿಸುವ ಹಕ್ಕು ಯಾರಿಗೂ ಇಲ್ಲ. ಜಮಾಲ್‌ಗೆ ನ್ಯಾಯ ಸಿಗುವವರೆಗೆ ನಾನು ಮತ್ತು ಇತರರು ವಿರಮಿಸುವುದಿಲ್ಲ” ಎಂದು ಎಂದು ಸೆಂಗಿಝ್ ಟ್ವೀಟ್ ಮಾಡಿದ್ದಾರೆ.

“ಅವರನ್ನು ಆಕರ್ಷಿಸಿ, ಹೊಂಚು ದಾಳಿ ನಡೆಸಿ ಕೊಲ್ಲುವ ಪೂರ್ವ ಯೋಜನೆಯೊಂದಿಗೆ ಹಂತಕರು ಸೌದಿ ಅರೇಬಿಯದಿಂದ ಬಂದರು. ನಾವು ಹಂತಕರನ್ನಾಗಲಿ, ಹತ್ಯೆಗೆ ಆದೇಶ ನೀಡಿದವರನ್ನಾಗಲಿ ಕ್ಷಮಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News