ಎಚ್ಚರ… ವಿಶೇಷ ವಿಮಾನಗಳ ಹೆಸರಲ್ಲಿ ದುಬೈಯಲ್ಲಿ ಭಾರತೀಯರನ್ನು ವಂಚಿಸುವವರಿದ್ದಾರೆ!

Update: 2020-05-25 15:53 GMT

ದುಬೈ (ಯುಎಇ), ಮೇ 25: ಭಾರತಕ್ಕೆ ವಿಶೇಷ ವಿಮಾನಗಳಲ್ಲಿ ಪ್ರಯಾಣಿಸಲು ಹಣ ಸಂಗ್ರಹಿಸುತ್ತಿರುವ ವಂಚಕರ ಬಗ್ಗೆ ಎಚ್ಚರಿಕೆಯಿಂದಿರುವಂತೆ ದುಬೈಯಲ್ಲಿರುವ ಭಾರತೀಯ ಕೌನ್ಸುಲೇಟ್ ಜನರಲ್ ಭಾರತೀಯ ಪ್ರಜೆಗಳನ್ನು ಎಚ್ಚರಿಸಿದೆ.

ಭಾರತದ ವಿವಿಧ ನಗರಗಳಿಗೆ ವಿಶೇಷ ವಿಮಾನಗಳನ್ನು ಏರ್ಪಡಿಸಲಾಗುತ್ತಿದೆ ಎಂದು ಹೇಳಿ ಯುಎಇಯಲ್ಲಿರುವ ಕೆಲವು ವ್ಯಕ್ತಿಗಳು ಮತ್ತು ಟ್ರಾವೆಲ್ ಏಜನ್ಸಿಗಳು ಭಾರತೀಯರನ್ನು ಸಂಪರ್ಕಿಸುತ್ತಿರುವುದು ಹಾಗೂ ಕೆಲವು ಪ್ರಕರಣಗಳಲ್ಲಿ, ವಿಮಾನ ಟಿಕೆಟ್ ದರ ಮತ್ತು ಭಾರತದಲ್ಲಿ ಕ್ವಾರಂಟೈನ್‌ಗೊಳಗಾಗಲು ಶುಲ್ಕವನ್ನು ಪಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಪತ್ರಿಕಾ ಹೇಳಿಕೆಯೊಂದರಲ್ಲಿ ಕೌನ್ಸುಲೇಟ್ ತಿಳಿಸಿದೆ.

ಈಗಿನವರೆಗೆ, ಇಂಥ ಯಾವುದೇ ವಿಶೇಷ ವಿಮಾನಗಳಿಗೆ ಭಾರತ ಸರಕಾರ ಯಾವುದೇ ಅನುಮತಿ ನೀಡಿಲ್ಲ ಎನ್ನುವುದನ್ನು ಯುಎಇಯಲ್ಲಿ ವಾಸಿಸುತ್ತಿರುವ ಎಲ್ಲ ಭಾರತೀಯರ ಗಮನಕ್ಕೆ ತರಲು ದುಬೈಯಲ್ಲಿರುವ ಭಾರತೀಯ ಕೌನ್ಸುಲೇಟ್ ಜನರಲ್ ಇಚ್ಛಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.

ಈ ಎಚ್ಚರಿಕೆಯನ್ನು ಗಣನೆಗೆ ತೆಗೆದುಕೊಂಡು ವಂಚಕರ ಯಾವುದೇ ಸಂಚಿಗೆ ಬಲಿಯಾಗದಂತೆ ಅದು ಭಾರತೀಯರನ್ನು ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News