ದಮಾಮ್ ನಿಂದ ಮಂಗಳೂರಿಗೆ ಮೊದಲ ಬಾಡಿಗೆ ವಿಮಾನದ ಖರ್ಚು ಭರಿಸಲು ಸಿದ್ಧ : ಸೌದಿ ಅನಿವಾಸಿ ಕನ್ನಡಿಗ ಉದ್ಯಮಿಗಳ ಆಫರ್

Update: 2020-05-26 16:07 GMT

ದಮಾಮ್, ಮೇ 26: ಕೊರೋನ ಲಾಕ್ ಡೌನ್ ನಿಂದ ವಿವಿಧ ದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಭಾರತೀಯರನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ಶುರುವಾಗಿದ್ದರೂ ಸೌದಿಯಲ್ಲಿ ಸಿಲುಕಿರುವ ದೊಡ್ಡ ಸಂಖ್ಯೆಯ ಕನ್ನಡಿಗರನ್ನು ಕರೆತರಲು ವಿಮಾನ ಕೂಡ ನಿಗದಿಯಾಗಿಲ್ಲದೇ ಇರುವ ಬಗ್ಗೆ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು.

ಇದೀಗ ಸರಕಾರದ ಮನವೊಲಿಸಲು ಹಾಗು ಹೇಗಾದರೂ ಅಲ್ಲಿಂದ ತಾಯ್ನಾಡಿಗೆ ಮರಳಲು ಕಾದು ಬಳಲಿದವರಿಗೆ ಆಸರೆಯಾಗಿ ಅನಿವಾಸಿ ಕನ್ನಡಿಗ ಉದ್ಯಮಿಗಳಿಬ್ಬರು ವಿಶಾಲ ಮನಸ್ಸಿನ್ನಿಂದ ದೊಡ್ಡ ಕೊಡುಗೆಯನ್ನು ಮುಂದಿಟ್ಟಿದ್ದಾರೆ. ಜೂನ್ 5 ರೊಳಗೆ ದಮಾಮ್ ನಿಂದ ಮಂಗಳೂರಿಗೆ ಒಂದು ಬಾಡಿಗೆ ವಿಮಾನ ಬರಲು ಕೇಂದ್ರ ಸರಕಾರದಿಂದ ಕರ್ನಾಟಕ ಸರಕಾರ ಅನುಮತಿ ಕೊಡಿಸಿದರೆ ಆ ವಿಮಾನದಲ್ಲಿ ಬರುವವರ ಖರ್ಚು ಭರಿಸಲು ತಮ್ಮ ಕಂಪೆನಿ ಸಿದ್ಧ ಎಂದು ದಮಾಮ್ ನ ಸಾಕೋ ಕಂಪೆನಿಯ ನಿರ್ದೇಶಕರಾದ ಅಲ್ತಾಫ್ ಉಳ್ಳಾಲ್ ಹಾಗು ಬಶೀರ್ ಸಾಗರ್ ಅವರು ಹೇಳಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗು ಕೇಂದ್ರ ನಾಗರೀಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದು ಮನವಿ ಮಾಡಿರುವ ಅಲ್ತಾಫ್ ಹಾಗು ಬಶೀರ್ ಅವರು ಮುಂದಿನ ಜೂನ್ 5 ರೊಳಗೆ ಈ ಬಾಡಿಗೆ ವಿಮಾನ ದಮಾಮ್ ನಿಂದ ಮಂಗಳೂರಿಗೆ ಬರಲು ಅವಕಾಶ ನೀಡಿದರೆ ತಾಯ್ನಾಡಿಗೆ ತುರ್ತಾಗಿ ಮರಳಲೇ ಬೇಕಾಗಿರುವ ವೈದ್ಯಕೀಯ ಚಿಕಿತ್ಸೆ  ಅಗತ್ಯಗಳಿರುವ, ವಿಸಿಟ್ ವೀಸಾದಲ್ಲಿ ಬಂದಿರುವ  ಹಿರಿಯರು, ಉದ್ಯೋಗ ಕಳೆದುಕೊಂಡವರ ಗರ್ಭಿಣಿ ಪತ್ನಿಯರು ಹಾಗು ಇತರ ತೀರಾ ತುರ್ತು ಅಗತ್ಯಗಳಿರುವ ಸುಮಾರು 180 ಮಂದಿ ಪ್ರಯಾಣಿಸಲು ತಗಲುವ ಸುಮಾರು 45 ಲಕ್ಷ ರೂಪಾಯಿಗಳನ್ನು ನಮ್ಮ ಕಂಪೆನಿಯಿಂದ ಭರಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನು ನೇರವಾಗಿ ಬಾಡಿಗೆ ವಿಮಾನ ಒದಗಿಸುವ ಸಂಸ್ಥೆಗೆ ನೀಡಲಾಗುವುದು. ಹೀಗೆ ಮೊದಲ ಬಾಡಿಗೆ ವಿಮಾನದಲ್ಲಿ ಪ್ರಯಾಣಿಸಿದವರು ಮಂಗಳೂರಿನಲ್ಲಿ ಕ್ವಾರಂಟೇನ್ ಖರ್ಚನ್ನು ಸ್ವತಃ ಭರಿಸಬೇಕು.

ಈಗಾಗಲೇ ಗಲ್ಫ್ ರಾಷ್ಟ್ರಗಳಾದ ಯುಎಇ, ಕತರ್ ಹಾಗು ಇತರ ಕೆಲವು ದೇಶಗಳಲ್ಲಿ ಸಿಲುಕಿರುವವರಿಗಾಗಿ ಭಾರತ ಸರಕಾರ ವಿಮಾನದ ವ್ಯವಸ್ಥೆ ಮಾಡಿದ್ದು ಅವರದೇ ಖರ್ಚಿನಲ್ಲಿ ಬಂದು ಇಲ್ಲಿ ಮತ್ತೆ ಅವರದೇ ಖರ್ಚಿನಲ್ಲಿ ಕ್ವಾರಂಟೇನ್ ಗೆ ಒಳಗಾಗುತ್ತಿದ್ದಾರೆ. ಆದರೆ ಹಲವಾರು ಬಾರಿ ಮನವಿ ಮಾಡಿದ್ದರೂ ಈವರೆಗೆ ಸೌದಿಯಿಂದ ಕರ್ನಾಟಕಕ್ಕೆ ವಿಮಾನ ಒದಗಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News