ಕೊರೋನದಿಂದ ಚೇತರಿಸಿಕೊಂಡಿದ್ದ ಕೇರಳದ ಯುವಕ ದುಬೈನಲ್ಲಿ ಆತ್ಮಹತ್ಯೆ

Update: 2020-05-26 18:10 GMT

ದುಬೈ: ಕೋವಿಡ್-19 ಸೋಂಕಿನಿಂದ ಚೇತರಿಸಿಕೊಂಡಿದ್ದ ಭಾರತೀಯ ಮೂಲದ ಯುವಕನೊಬ್ಬ ದುಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೂಲತಃ ಕೇರಳದವರಾದ 26 ವರ್ಷದ ಯುವಕ ಅಪಾರ್ಟ್‍ಮೆಂಟ್‍ನ ಏಳನೇ ಮಹಡಿಯಲ್ಲಿದ್ದ ಮನೆಯ ಬಾಲ್ಕನಿಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಪೊಲೀಸರು ಹೇಳಿದ್ದಾರೆ. ಸಂಬಂಧಿಕರು ಸೇರಿದಂತೆ ಆರು ಮಂದಿಯ ಜತೆ ಈ ಕಟ್ಟಡದಲ್ಲಿ ಅವರು ವಾಸವಿದ್ದರು.

ದುಬೈ ಪೊಲೀಸರು ಈ ಘಟನೆಯನ್ನು ದೃಢಪಡಿಸಿದ್ದು, ಇದು ಆತ್ಮಹತ್ಯೆ ಇರಬೇಕು ಎಂದು ಶಂಕಿಸಿದ್ದಾರೆ. “ಆತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ; ಈತನ ಸಾವಿನ ಹಿಂದೆ ಯಾವುದೇ ಅಪರಾಧ ಶಂಕೆ ಇಲ್ಲ” ಎಂದು ಸ್ಪಷ್ಪಪಡಿಸಿದ್ದಾರೆ.

ಈ ಘಟನೆ ರವಿವಾರ ನಡೆದಿದೆ. “ಪ್ರಾರ್ಥನೆಗಾಗಿ ಮುಂಜಾನೆ ಬೇಗ ಎದ್ದಿದ್ದ. ಪ್ರತಿಯೊಬ್ಬರೂ ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದಾಗ ಬಾಲ್ಕನಿಯತ್ತ ತೆರಳಿ ಅಲ್ಲಿಂದ ಹಾರಿದ” ಎಂದು ಸಂಬಂಧಿಕರು ಹೇಳಿದ್ದಾರೆ.

“ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಆತ ಕೆಲ ಸಮಯದಿಂದ ವಿಕ್ಷಿಪ್ತ ಮನಸ್ಸಿನವರಾಗಿದ್ದರು. ಪ್ರತಿಯೊಬ್ಬರೂ ತನ್ನ ಮೇಲೆ ದಾಳಿ ಮಾಡುತ್ತಾರೆ ಎಂಬ ಕಲ್ಪನೆಯಿಂದ ಆಹಾರ ಸೇವಿಸುವುದನ್ನೂ ಬಿಟ್ಟಿದ್ದ. ಜನ ತನಗೆ ವಿಷ ಉಣಿಸುತ್ತಾರೆ ಎಂಬ ಅನುಮಾನದಿಂದ ನಮ್ಮಿಂದ ನೀರು ಕೂಡ ತೆಗೆದುಕೊಳ್ಳುತ್ತಿರಲಿಲ್ಲ” ಎಂದು ಸಂಬಂಧಿಕರು ವಿವರಿಸಿದ್ದಾರೆ.

ಈ ಯುವಕನಿಗೆ ಏಪ್ರಿಲ್ 10ರಂದು ಕೋವಿಡ್ ಸೋಂಕು ದೃಢಪಟ್ಟಿತ್ತು. ಬಳಿಕ ಗುಣಮುಖರಾಗಿ ದುಬೈ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದ. ಅನಿವಾಸಿ ಕೇರಳಿಗರ ವ್ಯವಹಾರಗಳ ಇಲಾಖೆಯಲ್ಲಿ ಕಳೆದ ತಿಂಗಳು ಈತನ ಹೆಸರು ನೋಂದಾಯಿಸಲಾಗಿತ್ತು. ಆದರೆ ಟಿಕೆಟ್ ಲಭ್ಯವಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News