ಎಕ್ಸ್ ಪರ್ಟೈಸ್, ಅಲ್ ಮುಝೈನ್ ಕಂಪೆನಿಗಳ ಅತಂತ್ರ ಉದ್ಯೋಗಿಗಳು ಶೀಘ್ರವೇ ಬಾಡಿಗೆ ವಿಮಾನದಲ್ಲಿ ಮಂಗಳೂರಿಗೆ

Update: 2020-05-29 17:09 GMT

ಜುಬೈಲ್, ಮೇ 29: ಕೊರೋನ ಲಾಕ್ ಡೌನ್ ನಿಂದ ಸೌದಿಯಲ್ಲಿ ಅತಂತ್ರರಾಗಿ ತಾಯ್ನಾಡಿಗೆ ಮರಳಲು ಕಾದು ಕಂಗಾಲಾಗಿರುವ ಕನ್ನಡಿಗರಿಗೆ ಕೊನೆಗೂ ಆಶಾಕಿರಣ ಗೋಚರಿಸಿದೆ.

ತಮ್ಮ ಕಂಪೆನಿಯಲ್ಲಿ ಉದ್ಯೋಗಕ್ಕಾಗಿ ಬಂದು ಲಾಕ್ ಡೌನ್ ನಿಂದ ಉದ್ಯೋಗವಿಲ್ಲದೆ ಖಾಲಿ ಕುಳಿತವರನ್ನು ಊರಿಗೆ ಕಳಿಸಲು ಕೆಲವು ಪ್ರತಿಷ್ಠಿತ ಕಂಪೆನಿಗಳು ಮಾಡಿದ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಹಾಗಾಗಿ ಮೇ 30 ರಿಂದ ಈ ಕಂಪೆನಿಗಳು ನೇಮಿಸಿದ ಬಾಡಿಗೆ ವಿಮಾನಗಳಲ್ಲಿ ತಮ್ಮಲ್ಲಿ ಕೆಲಸಕ್ಕಾಗಿ ವಿಸಿಟ್ ವೀಸಾದಲ್ಲಿ ಹೋಗಿ ಅಲ್ಲಿ ಸಿಲುಕಿರುವವರು ಮಂಗಳೂರಿಗೆ ಬರಲಿದ್ದಾರೆ.

ಈ ಬಗ್ಗೆ ವಾರ್ತಾಭಾರತಿಗೆ ಮಾಹಿತಿ ನೀಡಿದ ಎಕ್ಸ್ ಪರ್ಟೈಸ್ ಕಂಟ್ರಾಕ್ಟಿಂಗ್ ಕಂಪೆನಿಯ ಆಡಳಿತ ನಿರ್ದೇಶಕ ಕೆ ಎಸ್ ಶೇಖ್ ಕರ್ನಿರೆ ಹಾಗು ಸಹೋದರರು "ಮುಂದಿನ ವಾರದೊಳಗೆ ಮಂಗಳೂರಿಗೆ ಎರಡು ಬಾಡಿಗೆ ವಿಮಾನಗಳಲ್ಲಿ ಇಲ್ಲಿಂದ ಜನರನ್ನು ಕಳಿಸಲು ನಮಗೆ ಅನುಮತಿ ಸಿಕ್ಕಿದೆ. ಮೊದಲ ಎರಡು ವಿಮಾನಗಳಲ್ಲಿ ಒಟ್ಟು 360 ಜನರು ಮಂಗಳೂರಿಗೆ ಪ್ರಯಾಣಿಸಲಿದ್ದಾರೆ. ದಿಲ್ಲಿ, ತಿರುವನಂತಪುರಂ, ಚೆನ್ನೈ, ಹೈದರಾಬಾದ್ ಗಳಿಗೆ ಕಂಪೆನಿ ನೇಮಿಸಿದ ಇತರ ಏಳು ಬಾಡಿಗೆ ವಿಮಾನಗಳಲ್ಲಿ ಜನರು ಪ್ರಯಾಣಿಸಲಿದ್ದಾರೆ.  ಅವರ ಸಂಪೂರ್ಣ ಪ್ರಯಾಣ ಖರ್ಚು ಹಾಗು ಊರಿಗೆ ತಲುಪಿದ ಬಳಿಕ ಕ್ವಾರಂಟೇನ್ ಖರ್ಚನ್ನು ನಮ್ಮ ಕಂಪೆನಿಯೇ ಭರಿಸಲಿದೆ. ನಾವು ಕಳೆದ ಒಂದೂವರೆ ತಿಂಗಳಿಂದ ಇದಕ್ಕಾಗಿ ಮಾಡಿದ ಸತತ ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಿದೆ. ಪ್ರಧಾನ ಮಂತ್ರಿಗಳು, ವಿದೇಶಾಂಗ ಸಚಿವರು, ಕೇಂದ್ರ ನಾಗರೀಕ ವಿಮಾನಯಾನ ಸಚಿವರು, ಕರ್ನಾಟಕ ಮುಖ್ಯಮಂತ್ರಿಗಳಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ. ವಿಮಾನ ಮಂಗಳೂರಿಗೆ ಬರಲು ಹಾಗು ಅಲ್ಲಿ ಕ್ವಾರಂಟೇನ್ ಗೆ ಸಹಕರಿಸಲು ಒಪ್ಪಿಗೆ ನೀಡಿದ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೂ ಧನ್ಯವಾದಗಳು. ನಮ್ಮ ಈ ಪ್ರಯತ್ನಕ್ಕೆ -ಪ್ರಾರಂಭದಿಂದಲೇ ಪೂರ್ಣ ಸಹಕಾರ ನೀಡಿ ಈ ವಿಷಯವನ್ನು ಸರಕಾರದ ಗಮನಕ್ಕೆ ತರುವಲ್ಲಿ ವಿಶೇಷ ಶ್ರಮ ವಹಿಸಿದ ವಾರ್ತಾಭಾರತಿಗೆ ನಮ್ಮ ವಿಶೇಷ ಅಭಿನಂದನೆಗಳು" ಎಂದು ಹೇಳಿದ್ದಾರೆ. 

ಮಂಗಳೂರಿನ ಇನ್ನೋರ್ವ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಝಕರಿಯ ಬಜ್ಪೆ ಅವರ ಅಲ್ ಮುಝೈನ್ ಕಂಪೆನಿಗೂ ಮಂಗಳೂರಿಗೆ ಮೂರು ಬಾಡಿಗೆ ವಿಮಾನಗಳನ್ನು ಕಳಿಸುವ ಅನುಮತಿ ಸಿಕ್ಕಿದೆ ಎಂದು ಮಾಹಿತಿ ಬಂದಿದೆ. ಜೂನ್ 2, 5 ಹಾಗು 8 ರಂದು ಈ ಮೂರು ವಿಮಾನಗಳು ಮಂಗಳೂರಿಗೆ ಬರಲಿವೆ ಎಂದು ಝಕರಿಯ ಅವರು ವಾರ್ತಾಭಾರತಿಗೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News