ಕೊಲ್ಲಿ ಸಹಕಾರ ಮಂಡಳಿಯಿಂದ ನಿರ್ಗಮಿಸುವುದಿಲ್ಲ: ಊಹಾಪೋಹಗಳನ್ನು ತಳ್ಳಿಹಾಕಿದ ಕತರ್

Update: 2020-05-29 17:03 GMT

ದೋಹಾ (ಕತರ್), ಮೇ 29: ಕೊಲ್ಲಿ ಸಹಕಾರ ಮಂಡಳಿ (ಜಿಸಿಸಿ)ಯಿಂದ ನಿರ್ಗಮಿಸಲು ತಾನು ಯೋಚಿಸುತ್ತಿದ್ದೇನೆ ಎಂಬ ಊಹಾಪೋಹಗಳನ್ನು ಖತರ್ ಗುರುವಾರ ತಳ್ಳಿಹಾಕಿದೆ.

ಅದೇ ವೇಳೆ, ಕತರ್ ದೇಶವನ್ನು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಪ್ರತ್ಯೇಕಿಸಲು ಜಿಸಿಸಿಯ ಆರು ಸದಸ್ಯ ದೇಶಗಳ ಪೈಕಿ ಮೂರು ಸದಸ್ಯ ದೇಶಗಳು ಮಾಡುತ್ತಿರುವ ಪ್ರಯತ್ನಗಳಿಂದಾಗಿ ಈ ಸಂಘಟನೆಯನ್ನು ವಲಯದ ಜನರು ಶಂಕಿಸುವಂತೆ ಮತ್ತು ಪ್ರಶ್ನಿಸುವಂತಾಗಿದೆ ಎಂದು ಅದು ಹೇಳಿದೆ.

ಮೂರು ವರ್ಷಗಳ ಹಿಂದೆ, ಕತರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ಸೌದಿ ಅರೇಬಿಯ, ಯುಎಇ, ಬಹರೈನ್ ಮತ್ತು ಈಜಿಪ್ಟ್ ದೇಶಗಳು ಏಕಾಏಕಿ ಆ ದೇಶದೊಂದಿಗಿನ ಎಲ್ಲ ರಾಜತಾಂತ್ರಿಕ ಮತ್ತ ಆರ್ಥಿಕ ಸಂಬಂಧಗಳನ್ನು ಕಡಿದುಕೊಂಡಿದ್ದವು.

ಈ ಸಂಬಂಧ ಕಡಿತದ ಮೂರನೇ ವಾರ್ಷಿಕ ದಿನ ಸಮೀಪಿಸುತ್ತಿದ್ದಂತೆಯೇ, ಕತರ್ ಈ ಹೇಳಿಕೆ ನೀಡಿದೆ.

1981ರಲ್ಲಿ ಸ್ಥಾಪನೆಯಾದ ಹಾಗೂ ಸೌದಿ ಅರೇಬಿಯದ ರಿಯಾದ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕೊಲ್ಲಿ ಸಹಕಾರ ಮಂಡಳಿಯಿಂದ ಕತರ್ ನಿರ್ಗಮಿಸುವ ದಿನಗಳು ಸನ್ನಿಹಿತವಾಗಿದೆ ಎಂಬ ಊಹಾಪೋಹಗಳು ಇತ್ತೀಚಿನ ದಿನಗಳಲ್ಲಿ ಕೊಲ್ಲಿ ದೇಶಗಳ ರಾಜಧಾನಿಗಳಲ್ಲಿ ಕೇಳಿಬರುತ್ತಿವೆ.

ಜಿಸಿಸಿಯಿಂದ ಹೊರಬರುವ ಬಗ್ಗೆ ಕತರ್ ಪರಿಶೀಲನೆ ನಡೆಸುತ್ತಿದೆ ಎಂಬ ವರದಿಗಳು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದು ಖತರ್‌ನ ಸಹಾಯಕ ವಿದೇಶ ಸಚಿವ ಲೋಲ್‌ವಾಹ್ ಅಲ್ ಖತರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News