ಕೊರೋನ ಲಾಕ್ ಡೌನ್ ಸಂದರ್ಭದಲ್ಲಿ ಬಿಡಬ್ಲ್ಯೂಎಫ್ ನಿಂದ ಅನಿವಾಸಿಗಳ ಸಮಸ್ಯೆಗೆ ಸ್ಪಂದನೆ : ಮುಹಮ್ಮದ್ ಅಲಿ ಉಚ್ಚಿಲ್

Update: 2020-06-03 11:21 GMT

ಅಬುಧಾಬಿ, ಜೂ.3: ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಕನ್ನಡಿಗರಿಗೆ ಯುಎಇಯ ಸಾಮುದಾಯಿಕ ಮತ್ತು ಸಾಮಾಜಿಕ ಸಂಘಟನೆ ಬ್ಯಾರೀಸ್ ವೆಲ್ಫೇರ್ ಫೋರಂ(ಬಿಡಬ್ಲ್ಯೂಎಫ್) ಈಗಾಗಲೇ ನೆರವಿಗೆ ಧಾವಿಸಿದೆ. ನಮ್ಮ ಪದಾಧಿಕಾರಿಗಳು ಮತ್ತು ಸ್ವಯಂಸೇವಕರು ವೈದ್ಯಕೀಯ ಸಹಾಯದ ಜೊತೆಗೆ ಆಹಾರ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ ಎಂದು ಬಿಡಬ್ಲ್ಯೂಎಫ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ತಿಳಿಸಿದ್ದಾರೆ.

ಕೊರೋನ ಬಾಧಿತರ ಮತ್ತು ಅವರ ಒಡನಾಟದಲ್ಲಿರುವವರ ತಪಾಸಣೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂತಾದ ಕಾರ್ಯಗಳಲ್ಲಿ ಭಾರತೀಯ ದೂತವಾಸದೊಂದಿಗೆ ಬಿಡಬ್ಲ್ಯೂಎಫ್ ಸಹಕರಿಸುತ್ತಿದೆ. ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಕನ್ನಡಿಗರನ್ನು ಗುರುತಿಸಿ ಅವರಿಗೆ ಆಹಾರ, ಸಹಿತ ದೈನಂದಿನ ಆವಶ್ಯಕ ಸಾಮಗ್ರಿಗಳ ಜೊತೆಗೆ ಅರ್ಹರಿಗೆ ಧನಸಹಾಯ ಕೂಡ ಮಾಡಲಾಗುತ್ತಿದೆ ಎಂದವರು ಹೇಳಿದ್ದಾರೆ.

ಈ ಪರಿಹಾರ ಕಾರ್ಯದಲ್ಲಿ ತನ್ನ ಹಾಗೂ ಬಿಡಬ್ಲ್ಯೂಎಫ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮದುಮೂಲೆ ನೇತೃತ್ವದಲ್ಲಿ ಸಿದ್ದೀಕ್ ಕಾಪು, ಇಮ್ರಾನ್ ಅಹ್ಮದ್, ರಶೀದ್ ಬಿಜೈ, ನವಾಝ್ ಉಚ್ಚಿಲ್, ಮುಹಮ್ಮದ್ ಕಲ್ಲಾಪು, ರಶೀದ್ ವಿಟ್ಲ, ಬಶೀರ್ ಉಚ್ಚಿಲ್ ತೊಡಗಿಸಿಕೊಂಡಿದ್ದಾರೆ. ಬಶೀರ್ ಬಜ್ಪೆ, ಹಂಝ ಎರ್ಮಾಳ್, ಅಬ್ದುರ್ರವೂಫ್, ಹಮೀದ್ ಗುರುಪುರ, ಅಬ್ದುಲ್ ಮಜೀದ್ ಕುತ್ತಾರ್, ಹನೀಫ್ ಉಳ್ಳಾಲ, ಜಲೀಲ್ ಬಜ್ಪೆ, ಮಜೀದ್ ಆತೂರು, ಮುಜೀಬ್ ಉಚ್ಚಿಲ, ಇರ್ಫಾನ್ ಅಹ್ಮದ್ ಮತ್ತು ಮುಹಿಯುದ್ದೀನ್ ಹಂಡೇಲು ಸಹಕರಿಸುತ್ತಿದ್ದಾರೆ ಎಂದು ಮುಹಮ್ಮದ್ ಅಲಿ ಉಚ್ಚಿಲ್ ಮಾಹಿತಿ ನೀಡಿದ್ದಾರೆ.

ಕೊರೋನ ಲಾಕ್‌ಡೌನ್‌ನಿಂದ ಯುಎಇಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಕನ್ನಡಿಗರ ನೆರವಿಗೆ ಕೂಡಲೇ ಧಾವಿಸುವಂತೆ ಕರ್ನಾಟಕದ ಮುಖ್ಯಮಂತ್ರಿ, ಭಾರತದ ವಿದೇಶಾಂಗ ಸಚಿವ ಹಾಗೂ ಇನ್ನಿತರ ಸ್ಥಳೀಯ ಜನಪ್ರತಿನಿಧಿಗಳಿಗೆ ಬಿಡಬ್ಲ್ಯೂಎಫ್ ವತಿಯಿಂದ ಈಗಾಗಲೇ ಮನವಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಊರಿಗೆ ಮರಳಲಿಚ್ಛಿಸುವ ಅನಿವಾಸಿ ಕನ್ನಡಿಗರನ್ನು ಕರೆತರಲು ಕರ್ನಾಟಕ ಸರಕಾರ, ಭಾರತ ಮತ್ತು ಯುಎಇ ಸರಕಾರದ ಜೊತೆ ಮಾತುಕತೆ ನಡೆಸಿ ಕಾರ್ಯಪ್ರವೃತ್ತರಾಗಬೇಕು. ಅಲ್ಲಿನ ಅನಿವಾಸಿ ಕನ್ನಡಿಗರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಮತ್ತು ಕ್ವಾರಂಟೈನ್ ವ್ಯವಸ್ಥೆಗಳ ಬಗ್ಗೆ ಖಾತರಿಪಡಿಸಬೇಕು. ಉದ್ಯೋಗ ಕಳೆದುಕೊಂಡು ತಾಯ್ನಾಡಿಗೆ ಮರಳಿರುವ ಅನಿವಾಸಿ ಕನ್ನಡಿಗರಿಗೆ ಕೇರಳದ ನೂರ್ಕಾ ಮಾದರಿಯಲ್ಲಿ ಪ್ರಾಧಿಕಾರ ಸ್ಥಾಪಿಸಿ ನೆರವಾಗಬೇಕು. ಕರ್ನಾಟಕಕಕ್ಕೆ ಹಿಂದಿರುಗುವ ಅನಿವಾಸಿಗಳಿಗೆ ಸೂಕ್ತ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸುವಂತೆ ಸರಕಾರವನ್ನು ಒತ್ತಾಯಿಸಲಾಗಿದೆ ಎಂದು ಮುಹಮ್ಮದ್ ಅಲಿ ಉಚ್ಚಿಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News