ಕುವೈತ್: ವಿದೇಶಿಯರ ಸಂಖ್ಯೆಯನ್ನು 70 ರಿಂದ 30 ಶೇಕಡಕ್ಕೆ ಇಳಿಸಲು ನಿರ್ಧಾರ

Update: 2020-06-04 15:11 GMT

ಕುವೈತ್ ಸಿಟಿ, ಜೂ. 4: ಕುವೈತ್‌ನಲ್ಲಿರುವ ವಿದೇಶಿಯರ ಸಂಖ್ಯೆಯನ್ನು ದೇಶದ ಜನಸಂಖ್ಯೆಯ 30 ಶೇಕಡಕ್ಕೆ ಇಳಿಸಬೇಕಾಗಿದೆ ಹಾಗೂ ಅದಕ್ಕಾಗಿ ಅರ್ಧಕ್ಕಿಂತಲೂ ಹೆಚ್ಚಿನ ವಿದೇಶಿಯರನ್ನು ವಾಪಸ್ ಕಳುಹಿಸಲು ಯೋಚಿಸಲಾಗುತ್ತಿದೆ ಎಂದು ದೇಶದ ಪ್ರಧಾನಿ ಶೇಖ್ ಸಬಾಹ್ ಅಲ್-ಖಾಲಿದ್ ಅಲ್-ಸಬಾಹ್ ಹೇಳಿದ್ದಾರೆ.

ಈಗ ಕುವೈತ್‌ನ ಜನಸಂಖ್ಯೆಯ 70 ಶೇಕಡ ವಿದೇಶೀಯರಾಗಿದ್ದಾರೆ!

ಕೊರೋನ ವೈರಸ್ ಸಾಂಕ್ರಾಮಿಕ ಮತ್ತು ತೈಲ ಬೆಲೆ ಕುಸಿತದಿಂದಾಗಿ ಕೊಲ್ಲಿ ದೇಶಗಳ ಆರ್ಥಿಕತೆ ನೆಲಕಚ್ಚಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಕುವೈತ್‌ನಲ್ಲಿರುವ 48 ಲಕ್ಷ ಜನರ ಪೈಕಿ 34 ಲಕ್ಷ ಮಂದಿ ವಿದೇಶೀಯರಾಗಿದ್ದಾರೆ ಹಾಗೂ ಈ ಅಸಮತೋಲನವನ್ನು ನಿವಾರಿಸುವ ಭವಿಷ್ಯದ ಸವಾಲನ್ನು ನಾವು ಕೈಗೆತ್ತಿಕೊಳ್ಳುತ್ತೇವೆ ಎಂದು ಬುಧವಾರ ಸ್ಥಳೀಯ ಪತ್ರಿಕೆಗಳ ಪ್ರಧಾನ ಸಂಪಾದಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದರು ಎಂದು ಸರಕಾರಿ ಒಡೆತನದ ಸುದ್ದಿ ಸಂಸ್ಥೆ ಕುನ ವರದಿ ಮಾಡಿದೆ.

ದೇಶದಲ್ಲಿರುವ ವಿದೇಶಿ ಉದ್ಯೋಗಿಗಳು, ಅದರಲ್ಲೂ ಮುಖ್ಯವಾಗಿ ಕೌಶಲರಹಿತ ಕಾರ್ಮಿಕರ ಸಂಖ್ಯೆಯನ್ನು ಕಡಿಮೆ ಮಾಡಲು ಸಂಸದರು ನಡೆಸುತ್ತಿರುವ ಪ್ರಯತ್ನಗಳಿಗೆ ಪೂರಕವಾಗಿ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ.

ಲಕ್ಷ ಸರಕಾರಿ ಉದ್ಯೋಗಿಗಳು ವಿದೇಶೀಯರು

ಕುವೈತ್‌ನಲ್ಲಿ ಸ್ಥಳೀಯರಿಗಾಗಿ ಕೋಟ ವ್ಯವಸ್ಥೆಯನ್ನು ಜಾರಿಗೆ ತರಬೇಕು ಹಾಗೂ ಎಲ್ಲ ವಿದೇಶಿ ಸರಕಾರಿ ಉದ್ಯೋಗಿಗಳ ಸ್ಥಾನದಲ್ಲಿ ಕುವೈತಿಗರನ್ನು ನೇಮಿಸಬೇಕು ಎಂಬ ಪ್ರಸ್ತಾವವನ್ನು ಸಂಸದರು ಮಂಡಿಸಿದ್ದಾರೆ. ಕುವೈತ್‌ನಲ್ಲಿ ಸುಮಾರು ಒಂದು ಲಕ್ಷ ವಿದೇಶಿ ಸರಕಾರಿ ಉದ್ಯೋಗಿಗಳಿದ್ದಾರೆ.

ಮನೆಗೆಲಸದ ಸಹಾಯಕರೇ 50 ಶೇ.ಕ್ಕಿಂತ ಅಧಿಕ

ಆದರೆ, ಕುವೈತಿಗರು ಮಾಡಲು ಇಷ್ಟಪಡದ ಕೆಲಸಗಳಲ್ಲಿ ಅವರನ್ನು ನೇಮಿಸುವುದು ಸಾಧ್ಯವಾಗಲಾರದು ಎಂದು ಪರಿಣತರು ಅಭಿಪ್ರಾಯಪಡುತ್ತಾರೆ.

ಕುವೈತ್‌ನಲ್ಲಿರುವ ವಿದೇಶೀಯರ ಪೈಕಿ ಮನೆಗೆಲಸದ ಸಹಾಯಕರೇ 50 ಶೇಕಡಕ್ಕಿಂತ ಹೆಚ್ಚಿದ್ದಾರೆ ಎಂದು ಖ್ಯಾತ ರಾಜಕೀಯ ಅಂಕಣಕಾರ ಸಾಜಿದ್ ಅಲ್-ಅಬ್ದಾಲಿ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News