ಗರ್ಭಿಣಿ ಪತ್ನಿ, ಸಂಕಷ್ಟದಲ್ಲಿದ್ದ ಇಬ್ಬರನ್ನು ಭಾರತಕ್ಕೆ ಕಳುಹಿಸಿದ್ದ ಕೇರಳದ ಇಂಜಿನಿಯರ್ ದುಬೈಯಲ್ಲಿ ಮೃತ್ಯು

Update: 2020-06-09 08:42 GMT

ದುಬೈ: ಲಾಕ್ ಡೌನ್ ಸಂದರ್ಭ ಸಂಯುಕ್ತ ಅರಬ್ ಸಂಸ್ಥಾನದಲ್ಲಿ ಬಾಕಿಯಾದವರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟಿನಲ್ಲಿ  ಪತ್ನಿಯ ಮೂಲಕ ಅಪೀಲು ಸಲ್ಲಿಸಿದ್ದ 28 ವರ್ಷದ ಕೇರಳದ ಇಂಜಿನಿಯರ್ ದುಬೈಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೃತ ನಿತಿನ್ ಚಂದ್ರನ್ ಕೇರಳದವರಾಗಿದ್ದು, ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಅವರು ನಿದ್ದೆಯಲ್ಲಿದ್ದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.

ನಿತಿನ್ ಪತ್ನಿ, 27 ವರ್ಷದ ಅದೀರಾ ಗೀತಾ ಶ್ರೀಧರನ್  ಗರ್ಭಿಣಿಯಾಗಿದ್ದರಿಂದ ಆದಷ್ಟು ಬೇಗ ತವರು ದೇಶಕ್ಕೆ ವಾಪಸಾಗಲು ಸಹಾಯ ಕೋರಿ  ಅವರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು.

ಮೇ 7ರಂದು ವಂದೇ ಭಾರತ್ ಮಿಷನ್ ಅನ್ವಯ ದುಬೈಯಿಂದ ಆಗಮಿಸಿದ ಮೊದಲ ವಿಮಾನದಲ್ಲಿ ಅದೀರಾ ವಾಪಸಾಗಿದ್ದರೆ ನಿತಿನ್ ದುಬೈಯಲ್ಲಿಯೇ ಉಳಿದಿದ್ದರು. ಊರಿಗೆ ವಾಪಸಾಗಲು ಅವಕಾಶಗಳಿದ್ದರೂ ದುಬೈಯಲ್ಲಿ ಹಣವಿಲ್ಲದೆ ಅತ್ಯಂತ ಕಷ್ಟದಲ್ಲಿರುವ ಇಬ್ಬರನ್ನು ನಿತಿನ್ ತನ್ನ ಬದಲಿಗೆ ಊರಿಗೆ ಕಳುಹಿಸಿದ್ದರು. ಆ ಇಬ್ಬರ ಪ್ರಯಾಣ ವೆಚ್ಚವನ್ನೂ ಅವರೇ ಭರಿಸಿದ್ದರು ಎಂದು ತಿಳಿದುಬಂದಿದೆ.

ಐಟಿ ಕಂಪೆನಿ ಉದ್ಯೋಗಿಯಾಗಿರುವ ಅದೀರಾ ಅವರು ಸುಪ್ರೀಂ ಕೋರ್ಟಿನಲ್ಲಿ ದಾಖಲಿಸಿದ್ದ ಅರ್ಜಿ ಹೆಚ್ಚಿನ ಪರಿಣಾಮ ಬೀರದೇ ಇದ್ದರೂ ಆಕೆಯನ್ನು ಆದ್ಯತೆಯ ಮೇರೆಗೆ ಮೊದಲ ವಿಮಾನದಲ್ಲಿಯೇ ವಾಪಸ್ ಕಳುಹಿಸಲು ಏರ್ಪಾಟು ಮಾಡಲಾಗಿತ್ತು.

ನಿತಿನ್ ಹಾಗೂ ಅದೀರಾ ದುಬೈಯಲ್ಲಿ ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದರಲ್ಲದೆ ಬ್ಲಡ್ ಡೋನರ್ಸ್ ಕೇರಳ-ಯುಎಇ ಘಟಕದ ಸದಸ್ಯರಾಗಿದ್ದರು. ಸೋಮವಾರ ನಿತಿನ್ ಮೃತಪಟ್ಟಿದ್ದರೆ, ಮಂಗಳವಾರ ಅದೀರಾ ಮಗುವಿಗೆ ಜನ್ಮ ನೀಡಿದ್ದಾರೆ ಎಂದು khaleejtimes.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News