ದಮಾಮ್‌ನಿಂದ ಮಂಗಳೂರಿಗೆ ಹೊರಟ ಸಾಕೋ ಕಂಪೆನಿಯ ಬಾಡಿಗೆ ವಿಮಾನ

Update: 2020-06-10 13:53 GMT

ದಮಾಮ್/ಮಂಗಳೂರು, ಜೂ.10: ಕೊರೋನ ಲಾಕ್‌ಡೌನ್ ನಿಂದ ಸೌದಿ ಅರೇಬಿಯಾದಲ್ಲಿ ಸಿಲುಕಿದ್ದ ಕನ್ನಡಿಗರ ನೆರವಿಗೆ ದಮಾಮ್‌ನಲ್ಲಿರುವ ಕನ್ನಡಿಗರ ಸಾಕೋ ಕಾಂಟ್ರಾಕ್ಟಿಂಗ್ ಕಂಪೆನಿ ಧಾವಿಸಿದೆ. ಅತಂತ್ರ ಕನ್ನಡಿಗರನ್ನೊಳಗೊಂಡ ಕಂಪೆನಿಯ ಬಾಡಿಗೆ ವಿಮಾನವು ದಮಾಮ್ ವಿಮಾನ ನಿಲ್ದಾಣದಿಂದ ನಿರ್ಗಮಿಸಿದ್ದು, ಬುಧವಾರ ರಾತ್ರಿ ಮಂಗಳೂರಿಗೆ ತಲುಪಲಿದೆ.

ದಮಾಮ್‌ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಜೆ 5:40ಕ್ಕೆ (ಸೌದಿ ಸಮಯ) ಹೊರಟ ವಿಮಾನವು ಮಂಗಳೂರಿಗೆ ರಾತ್ರಿ ಆಗಮಿಸಲಿದೆ. ಎಂಟು ಚಿಕ್ಕ ಮಕ್ಕಳು ಸಹಿತ 175 ಅತಂತ್ರ ಕನ್ನಡಿಗರು ಇದರಲ್ಲಿ ಪ್ರಯಾಣ ಬೆಳೆಸಿದ್ದಾರೆ.

ಈ ಬಗ್ಗೆ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿರುವ ಸಾಕೋ ಕಂಪೆನಿಯ ನಿರ್ದೇಶಕರಾದ ಅಲ್ತಾಫ್ ಉಳ್ಳಾಲ್ ಹಾಗೂ ಬಶೀರ್ ಸಾಗರ್, ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ದಮಾಮ್ ವಿಮಾನ ನಿಲ್ದಾಣದಿಂದ 175 ಅತಂತ್ರ ಕನ್ನಡಿಗರನ್ನು ಹೊತ್ತ ವಿಮಾನವು ಇಂದು ರಾತ್ರಿ ಮಂಗಳೂರಿಗೆ ತಲುಪಲಿದೆ ಎಂದು ಹೇಳಿದ್ದಾರೆ.

ಈ ವಿಶೇಷ ಬಾಡಿಗೆ ವಿಮಾನದಲ್ಲಿ ತಮ್ಮ ಸಂಸ್ಥೆಯ ಯಾವುದೇ ಸಿಬ್ಬಂದಿ ಅಥವಾ ಸಂಬಂಧಿಕರು ಪ್ರಯಾಣ ಬೆಳೆಸುತ್ತಿಲ್ಲ; ಬದಲಾಗಿ ಸಂಕಷ್ಟದಲ್ಲಿನ ಕನ್ನಡಿಗರಿಗಾಗಿಯೇ ಈ ಬಾಡಿಗೆ ವಿಮಾನವನ್ನು ಕಳುಹಿಸಲಾಗುತ್ತಿದೆ. ಎಲ್ಲ ಪ್ರಯಾಣಿಕರ ಪ್ರಯಾಣ ವೆಚ್ಚವನ್ನು ಕಂಪೆನಿಯೇ ಭರಿಸುತ್ತಿದೆ. ಅಲ್ಲದೆ, ಮಂಗಳೂರಿನಲ್ಲಿ ಕ್ವಾರಂಟೈನ್‌ಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಜೊತೆಗೆ ಕೊರೋನ ಪರೀಕ್ಷಾ ವೆಚ್ಚವನ್ನೂ ಸಂಸ್ಥೆಯೇ ಪಾವತಿಸಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಾಕೋ ಕಂಪೆನಿಯು ಬಾಡಿಗೆ ವಿಮಾನದಲ್ಲಿ ಪ್ರಯಾಣಿಸುವವರ ಪಟ್ಟಿ ಅಂತಿಮಗೊಳಿಸಲು ಈ ಮೊದಲು ಹೆಲ್ಪ್ ಡೆಸ್ಕ್ ಪ್ರಾರಂಭಿಸಿತ್ತು. ಇದಕ್ಕೆ ಬಂದಿದ್ದ ಕರೆಗಳ ಆಧಾರದಲ್ಲಿ ಗರ್ಭಿಣಿಯರು, ವಿಸಿಟ್ ವೀಸಾದಲ್ಲಿ ಬಂದು ಅತಂತ್ರರಾಗಿರುವ ಹಿರಿಯ ನಾಗರಿಕರು, ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯ ಇರುವವರು, ಕೆಲಸ ಕಳೆದುಕೊಂಡು ಕಂಗಾಲಾಗಿರುವವರು, ಊರಲ್ಲಿ ನಿಕಟ ಸಂಬಂಧಿಗಳು ಮೃತಪಟ್ಟವರು ಹಾಗೂ ತೀರಾ ಇತರ ತುರ್ತು ಅಗತ್ಯ ಇರುವವರರನ್ನು ಆದ್ಯತೆಯ ಮೇಲೆ ಆಯ್ಕೆ ಮಾಡಿ ಕಳುಹಿಸಲಾಗಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News