ಮಂಗಳೂರಿಗೆ ಹೊರಟ ಎಕ್ಸ್‌ಪರ್ಟೈಸ್ ಕಂಪೆನಿಯ ಎರಡನೇ ಬಾಡಿಗೆ ವಿಮಾನ

Update: 2020-06-11 10:55 GMT

ದಮ್ಮಾಮ್, ಜೂ.11: ಕೊರೋನ-ಲಾಕ್‌ಡೌನ್‌ನಿಂದಾಗಿ ಸೌದಿ ಅರೇಬಿಯಾದಲ್ಲಿ ಅತಂತ್ರರಾಗಿದ್ದ ತಮ್ಮ ಕಂಪೆನಿಯ ಉದ್ಯೋಗಿಗಳು ಹಾಗೂ ಅನಿವಾಸಿ ಕನ್ನಡಿಗರಿಗಾಗಿ ಎಕ್ಸ್‌ಪರ್ಟೈಸ್ ಕಂಪೆನಿಯು ಆಯೋಜಿಸಿದ ಎರಡನೆ ವಿಶೇಷ ಬಾಡಿಗೆ ವಿಮಾನವು ದಮ್ಮಾಮ್‌ನಿಂದ ಹೊರಟಿದ್ದು, ಸಂಜೆ 7:30ರ ವೇಳೆಗೆ ಮಂಗಳೂರು ತಲುಪಲಿದೆ.

ಜೂ.7ರಂದು ಎಕ್ಸ್‌ಪರ್ಟೈಸ್ ಕಂಪೆನಿಯ ಮೊದಲ ಬಾಡಿಗೆ ವಿಮಾನವು ಮಂಗಳೂರಿಗೆ ಆಗಮಿಸಿತ್ತು. ಅದರಲ್ಲಿ 168 ಪ್ರಯಾಣಿಕರಿದ್ದರು. ಇವರೆಲ್ಲರೂ ಎಕ್ಸ್‌ಪರ್ಟೈಸ್ ಕಂಪೆನಿಯ ಅತಂತ್ರ ಸ್ಥಿತಿಯಲ್ಲಿದ್ದ ಉದ್ಯೋಗಿಗಳಾಗಿದ್ದರು. ಗುರುವಾರ ಮಧ್ಯಾಹ್ನ ಹೊರಟ ಎರಡನೇ ಬಾಡಿಗೆ ವಿಮಾನದಲ್ಲಿ 90 ಮಂದಿ ಕಂಪೆನಿಯ ಹೊರತಾದ ಪ್ರಯಾಣಿಕರಿದ್ದಾರೆ. ಅದರಲ್ಲಿ ಹಿರಿಯರು, ಗರ್ಭಿಣಿಯರು, ಎಳೆಯ ಮಕ್ಕಳು ಸೇರಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಎಕ್ಸ್‌ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂಪೆನಿಯ ಆಡಳಿತ ನಿರ್ದೇಶಕ ಕೆ.ಎಸ್. ಶೇಖ್ ಕರ್ನಿರೆ, ಜೂ.7ರಂದು ಕಂಪೆನಿಯ ವತಿಯಿಂದ ಮೊದಲ ಬಾಡಿಗೆ ವಿಮಾನ ಮಂಗಳೂರು ತಲುಪಿತ್ತು. ಇದೀಗ ದಮಾಮ್‌ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎರಡನೇ ವಿಶೇಷ ಬಾಡಿಗೆ ವಿಮಾನವು ಮಂಗಳೂರಿನತ್ತ ಹೊರಟಿದೆ. ಇದರಲ್ಲಿ 169 ಮಂದಿ ಪ್ರಯಾಣಿಕರಿದ್ದಾರೆ. ಕಂಪೆನಿಯ ನೌಕರರ ಜೊತೆ ತುರ್ತಾಗಿ ಊರು ಸೇರಬೇಕಿದ್ದ 90 ಮಂದಿ ಅನಿವಾಸಿ ಕನ್ನಡಿಗರಿಗೆ ಆದ್ಯತೆ ನೀಡಿದ್ದೇವೆ. ಈ ವರೆಗೆ ನಮ್ಮ ಕಂಪೆನಿಯ ವತಿಯಿಂದ ಆರು ವಿಮಾನಗಳು ತಾಯ್ನಾಡಿಗೆ ಮರಳಿವೆ. ಇನ್ನೂ ಮೂರು ವಿಮಾನಗಳು ತಾಯ್ನಾಡಿಗೆ ಬರಲಿವೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News