ಅನಿವಾಸಿ ಭಾರತೀಯರ ಪ್ರತಿನಿಧಿಯಾಗಿ ಡಾ.ಆರತಿ ಕೃಷ್ಣಗೆ ಎಂ.ಎಲ್.ಸಿ ಸ್ಥಾನ ನೀಡಿ : ಮಲ್ನಾಡ್ ಗಲ್ಫ್ ಅಸೋಸಿಯೇಷನ್

Update: 2020-06-16 17:39 GMT
ಡಾ. ಆರತಿ ಕೃಷ್ಣ

ರಿಯಾದ್ : ಡಾ. ಆರತಿ ಕೃಷ್ಣ ಅವರು ಸಲ್ಲಿಸುತ್ತಿರುವ ಸೇವೆಗಳನ್ನು ಮತ್ತು ಅವರ ಅಪಾರ ಅನುಭವವನ್ನು ಪರಿಗಣಿಸಿ, ಮಲೆನಾಡಿನ ಜನರ ಧ್ವನಿಯಾಗಿ, ಅನಿವಾಸಿ ಭಾರತೀಯರ ಪ್ರತಿನಿಧಿಯಾಗಿ ಕರ್ನಾಟಕ ರಾಜ್ಯ ಸರ್ಕಾರ ವಿಧಾನ ಪರಿಷತ್ತಿಗೆ ಅವಿರೋಧ ಆಯ್ಕೆ ಮಾಡಬೇಕೆಂದು ಮಲ್ನಾಡ್ ಗಲ್ಪ್ ಅಸೋಸಿಯೇಷನ್ ತಿಳಿಸಿದೆ.

“ಮಲ್ನಾಡ್ ಗಲ್ಫ್  ಅಸೋಸಿಯೇಶನ್, ಸೌದಿ ಅರೇಬಿಯಾ ವತಿಯಿಂದ ಜೂ. 12ರಂದು ನಡೆದ 'ಒಂದು ಸಂವಾದ' ಎಂಬ ಆನ್ಲೈನ್ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಕರ್ನಾಟಕ ಸರ್ಕಾರದ ಎನ್.ಆರ್.ಐ.ಫೋರಮ್ (ಅನಿವಾಸಿ ಭಾರತೀಯರ ಒಕ್ಕೂಟ)ದ ಮಾಜಿ ಉಪಾಧ್ಯಕ್ಷರು - ಕೆ.ಪಿ.ಸಿ.ಸಿ ಎನ್.ಆರ್.ಐ ಘಟಕದ ಅಧ್ಯಕ್ಷರಾದ ಡಾ. ಆರತಿ ಕೃಷ್ಣ ಭಾಗವಹಿಸಿದರು.

ಕರ್ನಾಟಕ ರಾಜ್ಯದ ನಾಲ್ಕು ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು ಮತ್ತು ಕೊಲ್ಲಿ ರಾಷ್ಟ್ರಗಳಾದ ಕುವೈತ್ ಮತ್ತು ದುಬೈ ಶಾಖೆಗಳು ಮತ್ತು ಸೌದಿ ಅರೇಬಿಯಾದ ಜುಬೈಲ್-ದಮಾಮ್-ರಿಯಾದ್ ಮತ್ತು ಜಿದ್ದಾ ಘಟಕಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಮತ್ತು ಪದಾಧಿಕಾರಿಗಳ ಜೊತೆ ಅವರು ಮುಕ್ತವಾಗಿ ಚರ್ಚಿಸಿ ಅನಿವಾಸಿ ಕನ್ನಡಿಗರ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರು.

ಅನಿವಾಸಿ ಕನ್ನಡಿಗರು ವಿದೇಶದಲ್ಲಿ ಕೆಲಸ ಕಳೆದುಕೊಂಡಿದ್ದು, ಅದರಲ್ಲೂ ವಿಶೇಷವಾಗಿ ಮಲೆನಾಡ ಹಲವಾರು ಮಂದಿ ಸಿಲುಕಿಕೊಂಡಿದ್ದು ಅವರನ್ನು ತವರೂರಿಗೆ ಕಳುಹಿಸಿ ಕೊಡುವ ಬಗ್ಗೆ ಡಾ.ಆರತಿ ಕೃಷ್ಣರವರ ಸಹಕಾರ ಕೋರಲಾಯಿತು.

ಸಭೆಯಲ್ಲಿ ವಿವಿಧ ಭಾಗಗಳಿಂದ ಭಾಗವಹಿಸಿದ ಸದಸ್ಯರ ಪ್ರಶ್ನೆಗಳಿಗೆ ಮುಕ್ತವಾಗಿ ಉತ್ತರಿಸಿದ ಡಾ. ಆರತಿ ಅವರು ಸಹಾಯ ಮಾಡುವ ಭರವಸೆ ನೀಡಿದರು. ಸೌದಿ ಮತ್ತು ಇತರ ಅನೇಕ ರಾಷ್ಟ್ರಗಳಲ್ಲಿ ಸಂಕಷ್ಟದಲ್ಲಿರುವ ಭಾರತೀಯರನ್ನು ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ  ಡಾ. ಆರತಿ ಕೃಷ್ಣ ಅವರನ್ನು ಮಲ್ನಾಡ್ ಗಲ್ಫ್ ಅಸೋಸಿಯೇಷನ್ ವತಿಯಿಂದ ಪ್ರಶಂಸಿಸಿ ಅಭಿನಂದಿಸಲಾಯಿತು.

ಈ ಸಂದರ್ಭ ಪ್ರಸ್ತುತ ಡಾ. ಆರತಿರವರು ಸಲ್ಲಿಸುತ್ತಿರುವ ಸೇವೆಗಳನ್ನು ಮತ್ತು ಅವರ ಅಪಾರ ಅನುಭವವನ್ನು ಪರಿಗಣಿಸಿ ಮಲೆನಾಡಿನ ಜನರ ಕಷ್ಟಗಳಿಗೆ ಮಲೆನಾಡಿನ ಜನರ ಧ್ವನಿಯಾಗಿ, ಅನಿವಾಸಿ ಭಾರತೀಯರ ಪ್ರತಿನಿಧಿಯಾಗಿ ಕರ್ನಾಟಕ ರಾಜ್ಯ ಸರ್ಕಾರ ವಿಧಾನ ಪರಿಷತ್ತಿಗೆ ಅವಿರೋಧ ಆಯ್ಕೆ ಮಾಡಬೇಕೆಂದು ಮಲ್ನಾಡ್ ಗಲ್ಪ್ ಅಸೋಸಿಯೇಷನ್ ಸದಸ್ಯರ ಪರವಾಗಿ ನಿರ್ಣಯ ಕೈಗೊಳ್ಳಲಾಯಿತು.

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರೀಯ ಸಮಿತಿಯ ಅಧ್ಯಕ್ಷರಾದ ಶರೀಫ್ ಕಳಸ, ಗೌರವಾಧ್ಯಕ್ಷ ಬಶೀರ್ ಬಾಳ್ಳುಪೇಟೆ, ಹಿರಿಯ ಸಲಹೆಗಾರ ಫಾರೂಕ್ ಅರಬ್ ಎನರ್ಜಿ, ಪ್ರಧಾನ ಕಾರ್ಯದರ್ಶಿ ರಾಷಿದ್ ಅಹ್ಮದ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News