ಶಾರ್ಜಾ: ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಕೇರಳ ಮೂಲದ ಉದ್ಯಮಿ

Update: 2020-06-24 09:46 GMT
ಅಜಿತ್  ತಯ್ಯಿಲ್ (Photo: gulfnews.com)

ಶಾರ್ಜಾ: ಕೇರಳ ಮೂಲದ ಎನ್ನಾರೈ ಉದ್ಯಮಿ ಅಜಿತ್  ತಯ್ಯಿಲ್ ಎಂಬವರು ಬುಹೈರಾಹ್ ಪೊಲೀಸ್ ಠಾಣಾ ವ್ಯಾಪ್ತಿಯ ಬಹುಮಹಡಿ ಕಟ್ಟಡವೊಂದರಿಂದ ಕೆಳಕ್ಕೆ ಧುಮುಕಿ ಸೋಮವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಜಿತ್ ಅವರು ಸ್ಪೇಸ್ ಸೊಲ್ಯೂಶನ್ಸ್ ಇಂಟರ್ ನ್ಯಾಷನಲ್ ಗ್ರೂಪ್ ನಿರ್ದೇಶಕರಾಗಿದ್ದರು ಹಾಗೂ ಈ ಹಿಂದೆಯೇ ಕೈಬಿಡಲಾಗಿರುವ ಕೇರಳ ಪ್ರೀಮಿಯರ್ ಲೀಗ್ (ಕೆಪಿಎಲ್ ದುಬೈ) ಟಿ-20 ಇದರ ನಿರ್ದೇಶಕರೂ ಆಗಿದ್ದರು.

ಅವರ ಸಂಸ್ಥೆ ಕಟ್ಟಡ ನಿರ್ಮಾಣ ಗುತ್ತಿಗೆದಾರ ಸಂಸ್ಥೆಯಾಗಿದ್ದು ಸೂಪರ್ ಮಾರ್ಕೆಟ್‍ಗಳು ಹಾಗೂ ಹೈಪರ್ ಮಾರ್ಕೆಟ್‍ಗಳ ಗೋದಾಮುಗಳಿಗೆ ಅಗತ್ಯವಾದ ಮೆಟಲ್ ಫ್ರೇಮ್‍ಗಳನ್ನು ತಯಾರಿಸುತ್ತಿತ್ತು. ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಪುತ್ರ  ಇಂಗ್ಲೆಂಡ್‍ನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದರೆ ಪುತ್ರಿ ಶಾರ್ಜಾದಲ್ಲಿಯೇ ಶಿಕ್ಷಣ ಪಡೆದಿದ್ದರು. ತೈಯ್ಯಿಲ್ ಅವರು ಕಣ್ಣೂರು ಜಿಲ್ಲೆಯಲ್ಲಿ ಬಹು ದೊಡ್ಡ ಮನೆಯೊಂದನ್ನು ನಿರ್ಮಿಸಿದ್ದರು.

ಕೇರಳ ಮೂಲದ ಇನ್ನೊಬ್ಬ ಉದ್ಯಮಿ ಜಾಯ್ ಅರಕ್ಕಲ್ ಅವರು ಬಹುಮಹಡಿ ಕಟ್ಟಡವೊಂದರಿಂದ ಜಿಗಿದು ಆತ್ಮಹತ್ಯೆಗೈದ ಎರಡು ತಿಂಗಳಲ್ಲಿಯೇ ಇನ್ನೊಬ್ಬ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಂತಾಗಿದೆ. ಅಜಿತ್ ಅವರಿಗೆ ಯಾವುದೇ ದೊಡ್ಡ ಮಟ್ಟದ ಆರ್ಥಿಕ ಸಮಸ್ಯೆ ಇರಲಿಲ್ಲ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳಿದ್ದಾರೆ. ಕೋವಿಡ್-19 ಸಮಸ್ಯೆಯಿಂದ ಉದ್ಭವಿಸಿರುವ ಹಲವಾರು ಅಡೆತಡೆಗಳಿಂದ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಅವರ ಕೆಲ ಸ್ನೇಹಿತರು ಹೇಳುತ್ತಿದ್ದಾರೆ ಎಂದು ವರದಿಯಾಗಿದೆ.
    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News