ಯುಎಇಯಿಂದ ಭಾರತೀಯರನ್ನು ಹೊತ್ತು ತರುವ ವಿಮಾನಗಳಿಗೆ ಅನುಮತಿ ನೀಡದ ಡಿಜಿಸಿಎ

Update: 2020-07-05 16:17 GMT

ದುಬೈ, ಜು. 5: ಯುಎಇಯಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯ ವಲಸಿಗರನ್ನು ತಾಯ್ನಾಡಿಗೆ ಕರೆತರಲು ನಿಗದಿಯಾಗಿದ್ದ ಎರಡು ವಿಶೇಷ ವಿಮಾನಗಳು ಶನಿವಾರ ಕೊನೆಯ ಕ್ಷಣದಲ್ಲಿ ಹಾರಾಟ ರದ್ದುಪಡಿಸಿವೆ. ಈ ವಿಮಾನಗಳ ಹಾರಾಟಕ್ಕೆ ಭಾರತದಿಂದ ಅನುಮೋದನೆ ಲಭಿಸದಿರುವುದೇ ಅವುಗಳು ಹಾರಾಟ ನಡೆಸದಿರಲು ಕಾರಣ ಎಂದು ಯುಎಇಯಲ್ಲಿರುವ ಭಾರತೀಯ ನೆರವು ಸಂಸ್ಥೆಗಳು ಹೇಳಿವೆ. ಅದೂ ಅಲ್ಲದೆ, ಮುಂದಿನ ದಿನಗಳಲ್ಲಿ ಹಾರಾಟ ನಡೆಸಲು ಭಾರತದಿಂದ ಅನುಮತಿ ಲಭಿಸುವುದೇ, ಇಲ್ಲವೇ ಎಂಬ ಬಗ್ಗೆಯೂ ಅವುಗಳು ಆತಂಕ ಹೊಂದಿವೆ.

ಶನಿವಾರ ಅಬುಧಾಬಿಯಿಂದ ಕಲ್ಲಿಕೋಟೆಗೆ ಹಾರಾಟ ನಡೆಸಲು ನಿಗದಿಯಾಗಿದ್ದ ಎತಿಹಾದ್ ಏರ್‌ವೇಸ್‌ನ ವಿಮಾನವೊಂದನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಯಿತು, ಯಾಕೆಂದರೆ ಭಾರತದಲ್ಲಿ ಭೂಸ್ಪರ್ಶ ನಡೆಸಲು ವಿಮಾನಕ್ಕೆ ಅಗತ್ಯವಾಗಿದ್ದ ಅನುಮತಿಯನ್ನು ಭಾರತದ ನಾಗರಿಕ ವಾಯುಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಕಳುಹಿಸಲಿಲ್ಲ ಎಂದು ಸಾಮಾಜಿಕ ಸಂಘಟನೆ ಕೇರಳ ಮುಸ್ಲಿಮ್ ಕಲ್ಚರಲ್ ಸೆಂಟರ್ (ಕೆಎಮ್‌ಸಿಸಿ) ತಿಳಿಸಿದೆ. ಈ ವಿಮಾನವನ್ನು ಕೆಎಮ್‌ಸಿಸಿ ಬಾಡಿಗೆಗೆ ಪಡೆದುಕೊಂಡಿತ್ತು.

ವಿಮಾನವು 183 ಪ್ರಯಾಣಿಕರನ್ನು ಹೊತ್ತುಕೊಂಡು ಅಬುಧಾಬಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ಯ 2:20ಕ್ಕೆ ಹಾರಾಟ ನಡೆಸಬೇಕಾಗಿತ್ತು.

ಈ ವಿಷಯದಲ್ಲಿ ಭಾರತ ಅಥವಾ ಯುಎಇಯ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ನೀಡಿಲ್ಲವಾದರೂ, ಭಾರತಕ್ಕೆ ಇನ್ನು ಯಾವುದೇ ಹಾರಾಟ ನಡೆಸಲು ಅನುಮತಿ ನಿರಾಕರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ ಬಾಯ್ದೆರೆಯಾಗಿ ಯುಎಇಯ ವಿಮಾನಯಾನ ಕಂಪೆನಿಗಳಿಗೆ ತಿಳಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಆದರೆ, ಯುಎಇಯಿಂದ ಭಾರತೀಯ ವಲಸಿಗರನ್ನು ಅವರ ದೇಶಕ್ಕೆ ಸಾಗಿಸುವ ವಿಮಾನಗಳಿಗೆ ಅನುಮತಿ ನಿರಾಕರಿಸುವ ಅಧಿಕೃತ ಹೇಳಿಕೆ ಅಥವಾ ಕಾರಣದ ಅನುಪಸ್ಥಿತಿಯಿಂದ ಭಾರತೀಯ ವಲಸಿಗರು ಗಾಬರಿಗೊಂಡಿದ್ದಾರೆ.

ಅದೇ ವೇಳೆ, ಡಿಜಿಸಿಎ ಅನುಮೋದನೆಯ ಅನುಪಸ್ಥಿತಿಯ ಹಿನ್ನೆಲೆಯಲ್ಲಿ, ಶನಿವಾರ ಬೆಳಗ್ಗೆ ಭಾರತೀಯ ವಲಸಿಗರನ್ನು ಹೊತ್ತು ಶಾರ್ಜಾದಿಂದ ಮಧುರೈಗೆ ಹಾರಬೇಕಾಗಿದ್ದ ಇನ್ನೊಂದು ವಿಮಾನವೂ ಹಾರಾಟವನ್ನು ರದ್ದುಪಡಿಸಿದೆ. ಅದರಲ್ಲಿ ಪ್ರಯಾಣಿಸಬೇಕಾಗಿದ್ದ 168 ಪ್ರಯಾಣಿಕರು ಶಾರ್ಜಾದಲ್ಲೇ ಬಾಕಿಯಾಗಿದ್ದಾರೆ ಎಂದು ತಮಿಳು ಸಾಮಾಜಿಕ ಸಂಘಟನೆ ಕ್ಯೂಎಮ್‌ಎಸ್ ಹೇಳಿದೆ.

ಭಾರತೀಯ ವಲಸಿಗರು ಗಾಬರಿಗೊಂಡಿದ್ದಾರೆ: ಕೆಎಂಸಿಸಿ

‘‘ಡಿಜಿಸಿಎಯು ಸಾಮಾನ್ಯವಾಗಿ ವಿಮಾನ ಹಾರಾಟಕ್ಕೆ ಕೆಲವು ಗಂಟೆಗಳ ಮೊದಲು ಅನುಮೋದನೆ ಕಳುಹಿಸುತ್ತದೆ. ಈ ಬಾರಿ ಕೊನೆಯ ಕ್ಷಣದವರೆಗೂ ಅನುಮೋದನೆ ಸಿಗದ ಹಿನ್ನೆಲೆಯಲ್ಲಿ ನಾವು ಗಾಬರಿಯಾಗಿದ್ದೇವೆ. ಭಾರತೀಯ ರಾಯಭಾರ ಕಚೇರಿ ಮತ್ತು ಕೇರಳ ರಾಜ್ಯ ಸರಕಾರದಿಂದ ನಾವು ಎಲ್ಲ ಅನುಮೋದನೆಗಳನ್ನು ಪಡೆದುಕೊಂಡಿದ್ದೇವೆ. ಹಾಗಾಗಿ, ಚಿಂತಿಸಲು ನಮಗೆ ಯಾವುದೇ ಕಾರಣವಿರಲಿಲ್ಲ’’ ಎಂದು (ಕೇರಳ ಮುಸ್ಲಿಮ್ ಕಲ್ಚರಲ್ ಸೆಂಟರ್) ಕೆಎಮ್‌ಸಿಸಿ ಅಬುಧಾಬಿಯ ಅಧ್ಯಕ್ಷ ಶುಕೂರ್ ಅಲಿ ‘ಖಲೀಜ್ ಟೈಮ್ಸ್’ನೊಂದಿಗೆ ಮಾತನಾಡುತ್ತಾ ಹೇಳಿದರು.

‘‘ಏನು ನಡೆಯುತ್ತಿದೆ ಎನ್ನುವುದು ನಮಗೆ ಗೊತ್ತಿಲ್ಲ. ವಿಮಾನಗಳ ಹಾರಾಟಕ್ಕೆ ಯಾಕೆ ಅನುಮೋದನೆಯನ್ನು ನಿರಾಕರಿಸಲಾಗಿದೆ ಎನ್ನುವ ಬಗ್ಗೆ ಯಾವುದೇ ಅಧಿಕೃತ ಪ್ರಾಧಿಕಾರ ಅಥವಾ ವಿಮಾನಯಾನ ಸಂಸ್ಥೆ ನಮಗೆ ಮಾಹಿತಿ ನೀಡಿಲ್ಲ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News