ಹೊಸ ಕಾನೂನು: ಕುವೈತ್ ನಲ್ಲಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ 50,000ಕ್ಕೂ ಅಧಿಕ ಕನ್ನಡಿಗರು

Update: 2020-07-09 08:29 GMT

ಮಂಗಳೂರು: ವಿದೇಶಿ ಉದ್ಯೋಗಿಗಳ ಸಂಖ್ಯೆಯನ್ನು ಸೀಮಿತಗೊಳಿಸಲು ಕಾನೂನು ಜಾರಿಗೆ ತರುವ ಪ್ರಕ್ರಿಯೆಯನ್ನು ಕುವೈತ್ ಆರಂಭಿಸಿರುವ ಹಿನ್ನೆಲೆಯಲ್ಲಿ ಆ ದೇಶದಲ್ಲಿ ನೆಲೆ ನಿಂತಿರುವ 50,000ಕ್ಕೂ ಅಧಿಕ ಕನ್ನಡಿಗರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಕುವೈತ್‍ ನಲ್ಲಿ ಉದ್ಯೋಗದಲ್ಲಿರುವ ಕನ್ನಡಿಗರ ಪೈಕಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಯವರೇ ಅಧಿಕವಾಗಿರುವುದರಿಂದ  ಈ ಜಿಲ್ಲೆಗಳು ತೀವ್ರ ಬಾಧಿತವಾಗಲಿವೆ. ವಿದೇಶದಲ್ಲಿ ಉದ್ಯೋಗದಲ್ಲಿರುವವರು ತಮ್ಮ ಕುಟುಂಬಗಳಿಗೆ ಕಳುಹಿಸುವ ಹಣವೂ ಕಡಿಮೆಯಾಗಲಿರುವುದರಿಂದ ಕರಾವಳಿ ಜಿಲ್ಲೆಗಳ ಆರ್ಥಿಕತೆಯ ಮೇಲೂ ಇದು ಪರಿಣಾಮ ಬೀರಲಿದೆ.

ಹೆಚ್ಚು ವೇತನ ನೀಡುವ ಉದ್ಯೋಗ ಅರಸಿಕೊಂಡು ಗಲ್ಫ್ ರಾಷ್ಟ್ರಗಳಿಗೆ ತೆರಳುವವರು ಕುವೈತ್‍ nಲ್ಲಿ ಉದ್ಯೋಗಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದರು. ಇಲ್ಲಿ  ಸಾಮಾನ್ಯ ಕಾರ್ಮಿಕನೊಬ್ಬನಿಗೆ ಮಾಸಿಕ ವೇತನ ಸುಮಾರು ರೂ 35,000 ದೊರಕುತ್ತದೆ.

ಕುವೈತ್ ಸರಕಾರದ ಹೊಸ ನಿಯಮ ಜಾರಿಗೆ ಬರಲು ಇನ್ನೊಂದೆರಡು ವರ್ಷಗಳೇ ಬೇಕಾದೀತಾದರೂ  ಅಲ್ಲಿಯ ತನಕ ಕಾಯಲು ಹೆಚ್ಚಿನವರಿಗೆ ಮನಸ್ಸಿಲ್ಲ, ಕೋವಿಡ್ ಸಮಸ್ಯೆ, ಜತೆಗೆ ತೈಲ ಬೆಲೆಗಳಲ್ಲಿ ಇಳಿಕೆಯಿಂದಾಗಿ ಕುವೈತ್ ಆರ್ಥಿಕತೆ ಈಗಾಗಲೇ ಡೋಲಾಯಮಾನವಾಗಿದೆ.

ಕುವೈತ್‍ ನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕನ್ನಡಿಗರು ಉದ್ಯೋಗದಲ್ಲಿದ್ದರೆ ಹಲವರು ಅಲ್ಲಿ ತಮ್ಮ ಸ್ವಂತ ಉದ್ಯಮವನ್ನೂ ಹೊಂದಿದ್ದು ನಷ್ಟದ ಭೀತಿಯಲ್ಲಿದ್ದಾರೆ. ಹಲವರು ತಮ್ಮ ಕುಟುಂಬಗಳೊಂದಿಗೆ ಅಲ್ಲಿಯೇ ನೆಲೆ ನಿಂತಿರುವುದರಿಂದ ಹಾಗೂ ಮಕ್ಕಳೂ ಅಲ್ಲಿಯೇ ಶಾಲೆಗೆ ಹೋಗುತ್ತಿರುವುದರಿಂದ ಹೊಸ ಕಾನೂನಿನಿಂದ ಆತಂಕಿತರಾಗಿದ್ದಾರೆ. ಮಾಸಿಕ 450 ದಿನಾರ್ ಗಿಂತ ಹೆಚ್ಚಿನ ವೇತನ ಹೊಂದಿರುವವರಿಗೆ  ತಮ್ಮ ಕುಟುಂಬ ಸದಸ್ಯರನ್ನೂ ಕರೆಸಿಕೊಂಡು ಅಲ್ಲಿ ನೆಲೆಸಲು ಕುವೈತ್ ಕಾನೂನು ಅನುಮತಿಸುತ್ತದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News