ಅವಧಿ ಮುಗಿದ ವೀಸಾಗಳನ್ನು ಆನ್ಲೈನ್ ಮೂಲಕ ನವೀಕರಿಸಿ: ಪ್ರಜೆಗಳು, ವಲಸಿಗರಿಗೆ ಯುಎಇ ಸೂಚನೆ

Update: 2020-07-13 15:44 GMT

ಅಬುಧಾಬಿ (ಯುಎಇ), ಜು. 13: ಯುಎಇಯ ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಆ್ಯಂಡ್ ಸಿಟಿಝನ್ಶಿಪ್ ರವಿವಾರ ವಾಸ್ತವ್ಯ ನವೀಕರಣ ಅರ್ಜಿಗಳ ಸ್ವೀಕಾರವನ್ನು ಆರಂಭಿಸಿದೆ. ವೀಸಾ ಮತ್ತು ಎಮಿರೇಟ್ಸ್ ಗುರುತು ಚೀಟಿಗಳ ಅವಧಿ ಮುಗಿದಿರುವ ಯುಎಇ ನಿವಾಸಿಗಳು ಮತ್ತು ನಾಗರಿಕರು ಅವುಗಳ ನವೀಕರಣಕ್ಕಾಗಿ ಆನ್ಲೈನ್ ಮತ್ತು ಪ್ರಾಧಿಕಾರದ ಸ್ಮಾರ್ಟ್ ಚಾನೆಲ್ ಗಳ ಮೂಲಕ ಅರ್ಜಿ ಸಲ್ಲಿಸುವಂತೆ ಪ್ರಾಧಿಕಾರವು ಒತ್ತಾಯಿಸಿದೆ.

ಕೋವಿಡ್-19 ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ನವೀಕರಣ ಕೇಂದ್ರಗಳಲ್ಲಿ ಜನಸಂದಣಿಯನ್ನು ನಿವಾರಿಸುವುದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ನವೀಕರಣಕ್ಕಾಗಿ ನೀಡಲಾಗಿರುವ ರಿಯಾಯಿತಿ ಅವಧಿಯನ್ನು ಗಮನಿಸುವಂತೆಯೂ ಪ್ರಾಧಿಕಾರವು ಯುಎಇ ನಿವಾಸಿಗಳು (ವಲಸಿಗರು) ಮತ್ತು ನಾಗರಿಕರನ್ನು ಒತ್ತಾಯಿಸಿದೆ. ‘‘ದಾಖಲೆಗಳನ್ನು ನವೀಕರಿಸಲು ಯುಎಇ ಪ್ರಜೆಗಳು, ಜಿಸಿಸಿ (ಕೊಲ್ಲಿ ಸಹಕಾರ ಮಂಡಳಿಗೆ ಒಳಪಟ್ಟ ದೇಶಗಳ) ಪ್ರಜೆಗಳು ಮತ್ತು ಯುಎಇಯಲ್ಲೇ ಇರುವ ವಲಸಿಗರಿಗೆ ಮೂರು ತಿಂಗಳ ರಿಯಾಯಿತಿ ಅವಧಿಯನ್ನು ನೀಡಲಾಗಿದೆ’’ ಎಂದು ಸ್ಥಳೀಯ ಟೆಲಿವಿಶನ್ ಚಾನೆಲೊಂದಕ್ಕೆ ರವಿವಾರ ನೀಡಿದ ಸಂದರ್ಶನದಲ್ಲಿ ಪ್ರಾಧಿಕಾರದ ಅಧಿಕೃತ ವಕ್ತಾರ ಬ್ರಿಗೇಡಿಯರ್ ಖಾಮಿಸ್ ಮುಹಮ್ಮದ್ ಅಲ್ ಕಾಬಿ ಹೇಳಿದರು.

ಕೊರೋನ ವೈರಸ್ ಲಾಕ್ಡೌನ್ ಅವಧಿಯಲ್ಲಿ ತೆಗೆದುಕೊಳ್ಳಲಾದ ಹಲವಾರು ನಿರ್ಧಾರಗಳಿಗೆ ಯುಎಇ ಸಚಿವ ಸಂಪುಟವು ಶುಕ್ರವಾರ ತಿದ್ದುಪಡಿಗಳನ್ನು ಮಾಡಿತ್ತು.

ವೀಸಾ ಮತ್ತು ಗುರುತು ಚೀಟಿಗಳ ಅವಧಿಯು ಮಾರ್ಚ್ ಮತ್ತು ಎಪ್ರಿಲ್ ನಲ್ಲಿ ಮುಗಿದಿರುವವರಿಗಾಗಿ ನವೀಕರಣ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಬ್ರಿಗೇಡಿಯರ್ ಅಲ್ ಕಾಬಿ ತಿಳಿಸಿದರು.

ವಾಸ್ತವ್ಯ ಪರ್ಮಿಟ್ ಗಳ ಅವಧಿಯು ಮೇ ತಿಂಗಳಲ್ಲಿ ಮುಗಿದಿರುವವರ ನವೀಕರಣ ಅರ್ಜಿಗಳನ್ನು ಆಗಸ್ಟ್ 11ರಿಂದ ಸ್ವೀಕರಿಸಲಾಗುವುದು ಹಾಗೂ ಜೂನ್ 1 ಮತ್ತು ಜುಲೈ 12ರ ನಡುವಿನ ಅವಧಿಯಲ್ಲಿ ವೀಸಾ ಅವಧಿ ಮುಗಿದಿರುವವರು ಸೆಪ್ಟಂಬರ್ 10ರಿಂದ ಅರ್ಜಿಗಳನ್ನು ಸಲ್ಲಿಸಬಹುದು ಎಂದರು.

ಜುಲೈ 12ರ ಬಳಿಕ ವಾಸ್ತವ್ಯ ವೀಸಾ ಮತ್ತು ಗುರುತುಚೀಟಿಗಳ ಅವಧಿ ಮುಕ್ತಾಯಗೊಂಡಿರುವವರ ನವೀಕರಣ ಅವಧಿಯನ್ನು ನಿರ್ದಿಷ್ಟ ದಿನಾಂಕಕ್ಕೆ ಸೀಮಿತಗೊಳಿಸಲಾಗಿಲ್ಲ ಎಂದು ಅವರು ಹೇಳಿದರು.

ಆರು ತಿಂಗಳಿಗೂ ಹೆಚ್ಚು ಕಾಲ ಯುಎಇಯಿಂದ ಹೊರಗಿರುವ ಯುಎಇ ನಾಗರಿಕರು, ಜಿಸಿಸಿ ಪ್ರಜೆಗಳು ಮತ್ತು ವಲಸಿಗರಿಗೆ ತಮ್ಮ ದಾಖಲೆಗಳನ್ನು ನವೀಕರಿಸಲು ಅವರು ದೇಶಕ್ಕೆ ಆಗಮಿಸಿದಂದಿನಿಂದ ಒಂದು ತಿಂಗಳ ರಿಯಾಯಿತಿ ಅವಧಿಯನ್ನು ನೀಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News