ಸೌದಿಯಿಂದ ಮತ್ತೊಂದು ಬಾಡಿಗೆ ವಿಮಾನ: ಇಂದು ಮಧ್ಯಾಹ್ನ ಮಂಗಳೂರು ತಲುಪಲಿರುವ 180 ಪ್ರಯಾಣಿಕರು

Update: 2020-07-14 05:29 GMT

 ದಮ್ಮಾಮ್, ಜು.14: ಕೋವಿಡ್ 19 ಬಿಕ್ಕಟ್ಟಿನಿಂದಾಗಿ ಸೌದಿ ಅರೇಬಿಯಾದಲ್ಲಿ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ 180 ಮಂದಿಯನ್ನು ಹೊತ್ತ ಕೆಎಂಟಿ ಕಂಪೆನಿಯ ಚಾರ್ಟೆಡ್ ವಿಮಾನವು ಮಂಗಳವಾರ (ಜು.14) ಮಧ್ಯಾಹ್ನ ಮಂಗಳೂರು ತಲುಪಲಿದೆ.

ಇಂದು 6:30ಕ್ಕೆ ಇಂಡಿಗೊ ವಿಮಾನವು ಸೌದಿ ಅರೇಬಿಯಾದ ದಮ್ಮಾಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದು, ಸ್ಥಳೀಯ ಕಾಲಮಾನ ಮಧ್ಯಾಹ್ನ 1:30ರ ವೇಳೆಗೆ ಮಂಗಳೂರು ತಲುಪಲಿದೆ ಎಂದು ಕೆಎಂಟಿ ಸಿಇಒ ಅಬ್ದುರ್ರಝಾಕ್ ತಿಳಿಸಿದ್ದಾರೆ.

ಈ ವಿಮಾನದಲ್ಲಿ ಆರು ಪುಟ್ಟ ಮಕ್ಕಳು ಸೇರಿದಂತೆ ಒಟ್ಟು 180 ಮಂದಿ ಪ್ರಯಾಣಿಕರಿದ್ದಾರೆ. ಕೋವಿಡ್ 19 ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿರುವ ಗರ್ಭಿಣಿ ಮಹಿಳೆಯರು, ಹೃದ್ರೋಗ ಒಳಗೊಂಡಂತೆ ವಿವಿಧ ಗಂಭೀರ ಕಾಯಿಲೆಗೆ ಗುರಿಯಾಗಿರುವವರು ಮತ್ತು ಕಳೆದ ಹಲವು ತಿಂಗಳುಗಳಿಂದ ಉದ್ಯೋಗವಿಲ್ಲದೇ ಸಂಕಷ್ಟಕ್ಕೆ ಸಿಲುಕಿಕೊಂಡವರು ಕೆ.ಎಂ.ಟಿ ವಿಮಾನದ ಮೂಲಕ ತವರು ಸೇರಲಿದ್ದಾರೆ. ಇವರಲ್ಲಿ ತೀವ್ರ ಸಂಕಷ್ಟದಲ್ಲಿರುವ ಕೆಲವು ಮಂದಿಗೆ ಕೆ.ಎಂ.ಟಿ ಉಚಿತ ಟಿಕೆಟ್ ನೀಡಿದೆ. ಉಳಿದ ಪ್ರಯಾಣಿಕರು ತಾವೇ ಟಿಕೆಟ್ ಮೊತ್ತವನ್ನು ಪಾವತಿಸಿದ್ದಾರೆ.

ಕೆ.ಎಂ.ಟಿ. ದಕ್ಷಿಣ ಕನ್ನಡ ಜಿಲ್ಲೆಯ ಅಡ್ಡೂರಿನ ಶೌಕತ್, ಅಬ್ದುರ್ರಝಾಕ್, ಸಿದ್ದೀಕ್ ಮತ್ತು ಅಬ್ದುಲ್ ರಹ್ಮಾನ್ ಪಾಲುದಾರಿಕೆಯಲ್ಲಿ ಸ್ಥಾಪಿಸಿದ ಸಂಸ್ಥೆಯಾಗಿದ್ದು, ಸೌದಿ ಅರೇಬಿಯಾದ ಜುಬೈಲ್ ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಸಂಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರನ್ನು ನೆರವಾಗುವುದಕ್ಕಾಗಿ ಬಾಡಿಗೆ ವಿಮಾನವನ್ನು ಏರ್ಪಾಡುಗೊಳಿಸುವುದರಲ್ಲಿ ಕೆ.ಎನ್.ಆರ್.ಐ ಸೌದಿ ಅರೇಬಿಯಾದ ಮಾಜಿ ಅಧ್ಯಕ್ಷೆ ಡಾ.ಆರತಿ ಕೃಷ್ಣ ಅವರ ಪಾತ್ರ ಮಹತ್ವದ್ದಾಗಿದೆ. ಅದೇ ರೀತಿಯಲ್ಲಿ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಸ್ಯಾಕೊ ಕಂಪೆನಿ ಮಾಲಕ ಅಲ್ತಾ್ ಉಳ್ಳಾಲ ಮತ್ತು ಇಡೀ ಕಾರ್ಯಾಚರಣೆಗೆ ಸಹಕರಿಸಿದ ಕೆ.ಎಂ.ಟಿ ಕಂಪೆನಿಯ ಆಪರೇಶನ್ ಮ್ಯಾನೇಜರ್ ಸಾದಿಕ್ ಅಹ್ಮದ್ ಮತ್ತು ತಂಡಕ್ಕೆ ಅಬ್ದುಲ್ ರಝಾಕ್ ಕೃತಜ್ಞತೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News