ತೆಲಂಗಾಣ ಮೂಲದ ಕೊರೋನ ರೋಗಿಯ 1.52 ಕೋಟಿ ರೂ. ಬಿಲ್ ಮನ್ನಾ ಮಾಡಿದ ದುಬೈ ಆಸ್ಪತ್ರೆ

Update: 2020-07-16 11:40 GMT

ದುಬೈ : ತೆಲಂಗಾಣ ಮೂಲದ ಕೋವಿಡ್-19 ರೋಗಿಯೊಬ್ಬರಿಗೆ ನೀಡಲಾಗಿದ್ದ ಚಿಕಿತ್ಸೆಯ ಬಿಲ್ ಮೊತ್ತವಾದ 1.52 ಕೋಟಿ ರೂ.ಗಳನ್ನು ದುಬೈಯ ಆಸ್ಪತ್ರೆ ಮಾನವೀಯ ನೆಲೆಯಲ್ಲಿ ಮನ್ನಾಗೊಳಿಸಿ 80 ದಿನಗಳ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಿದೆ.

42 ವರ್ಷದ ಒಡ್ನಾಲ ರಾಜೇಶ್, ಮೂಲತಃ ಜಗತಿಯಾಲ್ ಜಿಲ್ಲೆಯ ಗೊಲ್ಲಪಲ್ಲಿ ಮಂಡಲದ ವೇಣುಗುಮಟಲ ಗ್ರಾಮದವರಾಗಿದ್ದು ಬುಧವಾರ ಮುಂಜಾನೆ ವಿಮಾನ ಮೂಲಕ ಹೈದರಾಬಾದ್ ತಲುಪಿದ್ದಾರೆ. ತೆಲಂಗಾಣ ಸರಕಾರದ ಎನ್‍ಆರ್‍ಐ ಘಟಕದ ಅಧಿಕಾರಿಗಳು ಆತನನ್ನು 14 ದಿನಗಳ ಗೃಹ ಕ್ವಾರಂಟೈನಿನಲ್ಲಿರಲು ಹೇಳಿ ಊರಿಗೆ ಕಳುಹಿಸಿದ್ದಾರೆ.

ಎರಡು ವರ್ಷಗಳ ಹಿಂದೆ ದುಬೈಗೆ ಕಟ್ಟಡ ನಿರ್ಮಾಣ ಕಾರ್ಮಿಕನಾಗಿ ದುಡಿಯಲು ತೆರಳಿದ್ದ ರಾಜೇಶ್‍ ಗೆ  ಕೆಮ್ಮು ಮತ್ತು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದುಬೈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆತನಿಗೆ ಕೋವಿಡ್ ಇರುವುದು ದೃಢಪಟ್ಟಿತ್ತು,. ಎಂಬತ್ತು ದಿನಗಳ ಚಿಕಿತ್ಸೆಯ ಆಸ್ಪತ್ರೆ ಬಿಲ್ 7,62,555 ದಿರ್ಹಂ (ರೂ 1.52 ಕೋಟಿ) ಆಗಿತ್ತು. ಆದರೆ ಆತನ ಬಳಿ ಹಣವಿಲ್ಲದೇ ಇದ್ದಾಗ ಸ್ಥಳೀಯ ತೆಲುಗು ಎನ್‍ಆರ್‍ಐ ಗುಂಡೆಲ್ಲಿ ನರಸಿಂಹ ಆತನ ಸಹಾಯಕ್ಕೆ ಬಂದಿದ್ದರು.

ದುಬೈಯಲ್ಲಿರುವ ಗಲ್ಫ್ ಕೆಲಸಗಾರರ ರಕ್ಷಣಾ ಸಂಘದ ಅಧ್ಯಕ್ಷರಾಗಿರುವ  ನರಸಿಂಹ ಆತನ ಸಮಸ್ಯೆಯನ್ನು ದುಬೈಯ ಭಾರತೀಯ ಕಾನ್ಸುಲೇಟ್‍ ನಲ್ಲಿನ  ಸ್ವಯಂಸೇವಕ ಸುಮಂತ್  ರೆಡ್ಡಿ ಗಮನಕ್ಕೆ ತಂದಿದ್ದರು. ಅವರು  ಹಾಗೂ ಇನ್ನೊಬ್ಬ ಸಮಾಜ ಸೇವಕ ದುಬೈಯ ಭಾರತೀಯ ಕಾನ್ಸುಲೇಟ್‍ ನ ಅಧಿಕಾರಿ ಹರ್‍ ಜೀತ್ ಸಿಂಗ್ ಅವರನ್ನು ಸಂಪರ್ಕಿಸಿದ ನಂತರ ಅವರು ದುಬೈ ಆಸ್ಪತ್ರೆ ಆಡಳಿತಕ್ಕೆ ಪತ್ರ ಬರೆದು ಬಿಲ್ ಮನ್ನಾಗೊಳಿಸುವಂತೆ ಕೋರಿದ್ದರು. ಅಂತೆಯೇ ಮಾನವೀಯ ನೆಲೆಯಲ್ಲಿ ಆಸ್ಪತ್ರೆಯು ಬಿಲ್ ಮನ್ನಾ ಮಾಡಿತ್ತು.

ಬಿಎಪಿಎಸ್ ಸ್ವಾಮಿನಾರಾಯಣ ಟ್ರಸ್ಟ್‍ ನ ಅಶೋಕ್ ಕೊಟೆಚಾ ಅವರು ರಾಜೇಶ್‍ ಗೆ ಊರಿಗೆ ಮರಳಲು ವಿಮಾನ ಟಿಕೆಟ್ ಒದಗಿಸಿದ್ದರೆ ಇನ್ನೊಬ್ಬ ಸಮಾಜ ಸೇವಕ ರೂ 10,000  ಹಣವನ್ನೂ ನೀಡಿದ್ದರು.

ರಾಜೇಶ್ ಪತ್ನಿ ಲಕ್ಷ್ಮಿ ಧೋಬಿ ಹಾಗೂ ಕೃಷಿ ಕೆಲಸ ಮಾಡುತ್ತಿದ್ದು, ದಂಪತಿಯ 18 ವರ್ಷದ ಪುತ್ರಿ ಬಿ.ಕಾಂ ವಿದ್ಯಾರ್ಥಿನಿಯಾಗಿದ್ದರೆ ಪುತ್ರ  12ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News