ಯುಎಇ: ಮಂಗಳ ಶೋಧಕ ನೌಕೆಯ ಉಡ್ಡಯನ ಜು. 20-22ರ ನಡುವೆ

Update: 2020-07-16 16:12 GMT

ದುಬೈ (ಯುಎಇ), ಜು. 16: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಮಂಗಳ ಗ್ರಹ ಶೋಧಕ ನೌಕೆ ‘ಹೋಪ್’ನ್ನು ಜುಲೈ 20 ಮತ್ತು 22 ನಡುವೆ ಉಡಾಯಿಸಲಾಗುವುದು ಎಂದು ಸರಕಾರದ ಅಧಿಕಾರಿಗಳು ಘೋಷಿಸಿದ್ದಾರೆ.

ಜಪಾನ್ ನ ಟನೆಗಶಿಮ ದ್ವೀಪದಲ್ಲಿರುವ ಬಾಹ್ಯಾಕಾಶ ನೆಲೆಯಿಂದ ಶೋಧಕ ನೌಕೆಯನ್ನು ಉಡಾಯಿಸಲಾಗುವುದು. ಆ ದ್ವೀಪದ ಪ್ರಸಕ್ತ ಹವಾಮಾನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನೌಕೆಯ ಉಡ್ಡಯನವನ್ನು ಈಗಾಗಲೇ ಎರಡು ಬಾರಿ ಮುಂದೂಡಲಾಗಿದೆ.

“ಟನೆಗಶಿಮ ದ್ವೀಪದಲ್ಲಿ ಮುಂಬರುವ ದಿನಗಳಲ್ಲಿ ನಿರಂತರ ಗುಡುಗುಮಿಂಚಿನ ಮಳೆ, ಮೋಡ ಮುಸುಕಿದ ವಾತಾವರಣ ಮತ್ತು ಅನಿಶ್ಚಿತ ಹವಾಮಾನ ಪರಿಸ್ಥಿತಿ ನೆಲೆಸಲಿರುವುದರಿಂದ, ‘ಹೋಪ್’ ಮಂಗಳ ಗ್ರಹ ಶೋಧಕ ನೌಕೆಯ ಉಡ್ಡಯನವನ್ನು, ಹವಾಮಾನ ಪರಿಸ್ಥಿತಿಯನ್ನು ಅವಲಂಬಿಸಿ ಜುಲೈ 20 ಮತ್ತು 22ರ ನಡುವೆ ನಡೆಸಲು ನಿರ್ಧರಿಸಲಾಗಿದೆ” ಎಂದು ಯುಎಇ ಬಾಹ್ಯಾಕಾಶ ಸಂಸ್ಥೆ ಮತ್ತು ಮುಹಮ್ಮದ್ ಬಿನ್ ರಶೀದ್ ಬಾಹ್ಯಾಕಾಶ ಕೇಂದ್ರಗಳು ಟ್ವಿಟರ್ನಲ್ಲಿ ಪ್ರಕಟಿಸಿವೆ.

ಹವಾಮಾನ ಪರಿಸ್ಥಿತಿಯನ್ನು ಅವಲಂಬಿಸಿ ನೂತನ ಉಡ್ಡಯನ ದಿನಾಂಕವನ್ನು ಘೋಷಿಸಲಾಗುವುದು ಎಂದು ಅದು ತಿಳಿಸಿದೆ.

ಶೋಧಕ ನೌಕೆಯ ಮೂಲ ಉಡ್ಡಯನ ಜುಲೈ 15ರ (ಬುಧವಾರ) ಮುಂಜಾನೆ 12:51ಕ್ಕೆ (ಯುಎಇ ಸಮಯ) ನಡೆಯಬೇಕಾಗಿತ್ತು. ಬಳಿಕ ಅದನ್ನು ಜುಲೈ 17 (ಶುಕ್ರವಾರ)ರ ಮುಂಜಾನೆ 12:43ಕ್ಕೆ ಮುಂದೂಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News