ರಜೆಯಲ್ಲೂ ತೆರೆದಿರುವ ದುಬೈಯ ಭಾರತೀಯ ಕೌನ್ಸುಲೇಟ್ ಕಚೇರಿ

Update: 2020-07-20 16:23 GMT

ದುಬೈ, ಜು. 20: ದುಬೈಯಲ್ಲಿರುವ ಭಾರತೀಯ ಕೌನ್ಸುಲೇಟ್ ಜನರಲ್ ಕಚೇರಿಯು ಆಗಸ್ಟ್ 1ರಿಂದ ವಾರಾಂತ್ಯಗಳು ಮತ್ತು ಸಾರ್ವಜನಿಕ ರಜಾ ದಿನಗಳಲ್ಲಿಯೂ ತೆರೆದಿರುತ್ತದೆ ಎಂದು ಕೌನ್ಸುಲ್ ಜನರಲ್ ಡಾ. ಅಮನ್ ಪುರಿ ‘ಖಲೀಜ್ ಟೈಮ್ಸ್’ಗೆ ತಿಳಿಸಿದ್ದಾರೆ.

ಜುಲೈ 19ರಂದಷ್ಟೇ ಕೌನ್ಸುಲರ್ ಜನರಲ್ ಆಗಿ ಅಧಿಕಾರ ಸ್ವೀಕರಿಸಿದ ಅವರು, ಕೋವಿಡ್-19 ಸಾಂಕ್ರಾಮಿಕದಿಂದಾಗಿ ಉದ್ಭವಿಸಿರುವ ಪ್ರಸಕ್ತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಾರಾಂತ್ಯಗಳು ಮತ್ತು ಸಾರ್ವಜನಿಕ ರಜಾದಿನಗಳು ಸೇರಿದಂತೆ ಎಲ್ಲಾ ದಿನಗಳಲ್ಲೂ ಕೌನ್ಸುಲೇಟ್ ಸೇವೆಗಳು ಲಭಿಸುವಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.

‘‘ಆಗಸ್ಟ್ 1ರಿಂದ ಡಿಸೆಂಬರ್ 31ರವರೆಗೆ, ಕೌನ್ಸುಲೇಟ್ ಕಚೇರಿಯು ಎಲ್ಲ ರಜಾ ದಿನಗಳಲ್ಲಿ ಬೆಳಗ್ಗೆ 8 ಗಂಟೆಯಿಂದ 10 ಗಂಟೆವರೆಗೆ ಎರಡು ಗಂಟೆಗಳ ಕಾಲ ತೆರೆದಿರುವುದು. ತುರ್ತು ವಾಪಸಾತಿಗಾಗಿ ಪಾಸ್‌ಪೋರ್ಟ್ ನವೀಕರಣ ಮುಂತಾದ ತುರ್ತು ಅಗತ್ಯ ಸೇವೆಗಳನ್ನು ಆ ದಿನಗಳಲ್ಲಿ ನೀಡಲಾಗುವುದು’’ ಎಂದು ಡಾ. ಪುರಿ ತಿಳಿಸಿದರು.

ಆದರೂ, ವಾರದ ಎಲ್ಲಾ ದಿನಗಳಲ್ಲಿ ಕೌನ್ಸುಲೇಟ್ ಕಚೇರಿಯನ್ನು ತೆರೆದಿಡುವ ನಿರ್ಧಾರವನ್ನು ಪರಿಸ್ಥಿತಿಗೆ ಹೊಂದಿಕೊಂಡು ಮರುಪರಿಶೀಲನೆ ನಡೆಸಬಹುದಾಗಿದೆ ಎಂದು ಅವರು ನುಡಿದರು.

‘‘ಮುಂಬರುವ ದಿನಗಳು ಕಠಿಣವಾಗಿರುತ್ತವೆ ಹಾಗೂ ಜನರಿಗೆ ನಮ್ಮ ಬೆಂಬಲದ ಅಗತ್ಯವಿದೆ ಎನ್ನುವುದನ್ನು ನಾವು ಮನಗಂಡಿದ್ದೇವೆ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News