ವಿಶ್ವಾದ್ಯಂತ ಬಿ.ಆರ್. ಶೆಟ್ಟಿ ಆಸ್ತಿ ಮುಟ್ಟುಗೋಲಿಗೆ ದುಬೈ ನ್ಯಾಯಾಲಯ ಆದೇಶ

Update: 2020-07-25 16:25 GMT

ದುಬೈ, ಜು.25: ಎನ್‌ಎಂಸಿ ಹೆಲ್ತ್ ಸಂಸ್ಥೆಯ ಸ್ಥಾಪಕ ಬಿ.ಆರ್. ಶೆಟ್ಟಿಯಿಂದ ತನಗೆ 8 ಮಿಲಿಯನ್ ಡಾಲರ್‌ಗೂ ಅಧಿಕ ಸಾಲ ಮರುಪಾವತಿಗೆ ಬಾಕಿಯಿದ್ದು ಅವರು ವಿಶ್ವದಾದ್ಯಂತ ಹೊಂದಿರುವ ಆಸ್ತಿಗಳ ಮುಟ್ಟುಗೋಲಿಗೆ ಆದೇಶ ನೀಡಬೇಕೆಂಬ ಬ್ಯಾಂಕ್‌ನ ಕೋರಿಕೆಯನ್ನು ದುಬೈಯ ನ್ಯಾಯಾಲಯ ಪುರಸ್ಕರಿಸಿದೆ.

ಬಿ.ಆರ್. ಶೆಟ್ಟಿ, ನ್ಯೂ ಮೆಡಿಕಲ್ ಸೆಂಟರ್ ಟ್ರೇಡಿಂಗ್ ಮತ್ತು ಎನ್‌ಎಂಸಿ ಹೆಲ್ತ್‌ ಕೇರ್ ಸಂಸ್ಥೆಗಳ ವಿರುದ್ಧ ಡಿಐಎಫ್‌ಸಿ ಕೋರ್ಟ್ ನಲ್ಲಿ ನೆದರ್ ಲ್ಯಾಂಡ್ ಮೂಲದ ಕ್ರೆಡಿಟ್ ಯುರೋಪ್ ಬ್ಯಾಂಕ್‌ನ ದುಬೈ ವಿಭಾಗವು ಸಲ್ಲಿಸಿದ್ದ ಕೋರಿಕೆಯನ್ನು ಪರಿಗಣಿಸಿದ ನ್ಯಾಯಾಲಯ, ಆಸ್ತಿ ಮುಟ್ಟುಗೋಲಿಗೆ ಆದೇಶಿಸಿದೆ.

ಅರ್ಜಿಯಲ್ಲಿ ಉಲ್ಲೇಖಿಸಿದವರು, ಕಳೆದ ವರ್ಷದ ಡಿಸೆಂಬರ್‌ ನಲ್ಲಿ ಪಡೆದಿರುವ ಸಾಲ ತೀರಿಸಲು ಜಂಟಿಯಾಗಿ ಮತ್ತು ವ್ಯಕ್ತಿಗತ ರೂಪದಲ್ಲಿ ಹೊಣೆಗಾರರಾಗಿದ್ದಾರೆ ಎಂದು ಬ್ಯಾಂಕ್ ವಾದಿಸಿತ್ತು. ಸಾಲಕ್ಕೆ ಭದ್ರತೆಯಾಗಿ ಬಿಆರ್ ಶೆಟ್ಟಿ ಸಹಿ ಹಾಕಿದ ಎರಡು ಚೆಕ್‌ಗಳನ್ನು ನೀಡಲಾಗಿತ್ತು. (ಒಂದನ್ನು ಅವರ ವೈಯಕ್ತಿಕ ಖಾತೆಯಿಂದ, ಮತ್ತೊಂದನ್ನು ನ್ಯೂ ಮೆಡಿಕಲ್ ಸೆಂಟರ್ ಖಾತೆಯಿಂದ ನೀಡಲಾಗಿತ್ತು). ಖಾತೆಯಲ್ಲಿ ಸಾಕಷ್ಟು ಹಣವಿಲ್ಲ ಎಂಬ ಕಾರಣದಿಂದ ಎರಡೂ ಚೆಕ್‌ಗಳು ಬೌನ್ಸ್ ಆಗಿವೆ. ಶೆಟ್ಟಿ ಈಗ ಯುಎಇ ನ್ಯಾಯವ್ಯಾಪ್ತಿಯಿಂದ ಭಾರತಕ್ಕೆ ಪಲಾಯನ ಮಾಡಿದ್ದಾರೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಅಬುಧಾಬಿ ಮತ್ತು ದುಬೈಯಲ್ಲಿರುವ ಆಸ್ತಿಗಳು, ಎನ್‌ಎಂಸಿ, ಫಿನಾಬ್ಲರ್, ಬಿಆರ್‌ಎಸ್ ಇನ್‌ ವೆಸ್ಟ್‌ ಮೆಂಟ್ ಹೋಲ್ಡಿಂಗ್ಸ್ ಹಾಗೂ ಇತರ ಸಂಸ್ಥೆಗಳಲ್ಲಿರುವ ಶೇರುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯ ಅನುಮತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News