ಅಬುಧಾಬಿ: ಫ್ಲ್ಯಾಟ್‌ನಲ್ಲಿ ಭಾರತೀಯ ದಂಪತಿಯ ಮೃತದೇಹಗಳು ಪತ್ತೆ

Update: 2020-07-25 16:41 GMT

ಅಬುಧಾಬಿ (ಯುಎಇ), ಜು. 25: ಯುಎಇ ರಾಜಧಾನಿ ಅಬುಧಾಬಿ ನಗರದಲ್ಲಿರುವ ತಮ್ಮ ಫ್ಲ್ಯಾಟ್‌ನಲ್ಲಿ ಭಾರತೀಯ ದಂಪತಿ ಜನಾರ್ದನನ್ ಪಟ್ಟಿಯೆರಿ ಮತ್ತು ಮಿನಿಜಾ ಅವರ ಮೃತದೇಹಗಳು ಪತ್ತೆಯಾಗಿವೆ.

ಕೇರಳ ರಾಜ್ಯದ ಕಲ್ಲಿಕೋಟೆಯವರಾಗಿರುವ ದಂಪತಿ ಅಬುಧಾಬಿಯಲ್ಲಿ ಸುಮಾರು 18 ವರ್ಷಗಳಿಂದ ವಾಸವಾಗಿದ್ದರು. 57 ವರ್ಷದ ಪಟ್ಟಿಯೇರಿ ಟ್ರಾವೆಲ್ ಏಜನ್ಸಿಯೊಂದರಲ್ಲಿ ಕೆಲಸ ಮಾಡಿದರೆ, 52 ವರ್ಷದ ಮಿನಿಜಾ ಚಾರ್ಟರ್ಡ್ ಅಕೌಂಟೆಂಟ್ ಮತ್ತು ಆಡಿಟ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಇತ್ತೀಚೆಗೆ ಪಟ್ಟಿಯೇರಿ ತನ್ನ ಕೆಲಸ ಕಳೆದುಕೊಂಡಿದ್ದರು ಎಂದು ಸಹೋದ್ಯೋಗಿಯೊಬ್ಬರು ತಿಳಿಸಿದ್ದಾರೆ. ದಂಪತಿಯ ಏಕೈಕ ಪುತ್ರ ಅಬುಧಾಬಿಯಲ್ಲಿ ಕಲಿತಿದ್ದು ಈಗ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದಾರೆ.

‘‘ನನ್ನ ತಂದೆ-ತಾಯಿ ಕಳೆದ ನಾಲ್ಕು ದಿನಗಳಿಂದ ಫೋನ್ ಸ್ವೀಕರಿಸುತ್ತಿಲ್ಲ ಎಂಬುದಾಗಿ ಅವರ ಮಗ ನನಗೆ ಫೋನ್ ಮಾಡಿ ಹೇಳಿದರು. ಆಗ ನಾನು ಅವರ ಕಟ್ಟಡಕ್ಕೆ ಹೋದೆ. ಕಳೆದ ಕೆಲವು ದಿನಗಳಿಂದ ನಾನು ಅವರನ್ನು ನೋಡಿಲ್ಲ ಎಂದು ಕಟ್ಟಡದ ಉಸ್ತುವಾರಿ ಹೇಳಿದರು. ಗುರುವಾರ ರಾತ್ರಿ ಫ್ಲ್ಯಾಟ್‌ನಲ್ಲಿ ಅವರ ಶವಗಳನ್ನು ಪೊಲೀಸರು ಪತ್ತೆಹಚ್ಚಿದರು’’ ಎಂದು ಅವರ ಸ್ನೇಹಿತರೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News