ಹಜ್ ಯಾತ್ರೆ ಆರಂಭ: ಕೊರೋನ ಸಾಂಕ್ರಾಮಿಕದ ಭೀತಿಯಲ್ಲಿ 10,000 ಸೌದಿ ನಿವಾಸಿಗಳಿಗೆ ಮಾತ್ರ ಅವಕಾಶ

Update: 2020-07-29 16:34 GMT

ಮಕ್ಕಾ (ಸೌದಿ ಅರೇಬಿಯ), ಜು. 29: ಮುಸ್ಲಿಮ್ ಯಾತ್ರಿಕರು ಬುಧವಾರ ವಾರ್ಷಿಕ ಹಜ್ ಯಾತ್ರೆಯನ್ನು ಆರಂಭಿಸಿದ್ದಾರೆ. ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಸೋಂಕು ಹರಡುವುದನ್ನು ತಡೆಯುವುದಕ್ಕಾಗಿ ಈ ಬಾರಿ ಹಜ್ ಯಾತ್ರಿಕರ ಸಂಖ್ಯೆಯನ್ನು 10,000ಕ್ಕೆ ಸೀಮಿತಗೊಳಿಸಲಾಗಿದೆ ಹಾಗೂ ಹಲವಾರು ಸೋಂಕು ನಿರೋಧಕ ಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ.

ಸಾಮಾನ್ಯವಾಗಿ 5 ದಿನಗಳ ಹಜ್ ಯಾತ್ರೆಯು ಜಗತ್ತಿನ ಅತಿ ದೊಡ್ಡ ಧಾರ್ಮಿಕ ವಾರ್ಷಿಕ ಸಮಾವೇಶವಾಗಿದ್ದು, ಕಳೆದ ವರ್ಷ ಜಗತ್ತಿನಾದ್ಯಂತದ 25 ಲಕ್ಷಕ್ಕೂ ಅಧಿಕ ಶ್ರದ್ಧಾಳುಗಳು ಇದರಲ್ಲಿ ಭಾಗವಹಿಸಿದ್ದರು.

ಆದರೆ, ಈ ಬಾರಿಯ ಹಜ್‌ನಲ್ಲಿ ಈಗಾಗಲೇ ಸೌದಿ ಅರೇಬಿಯದಲ್ಲಿ ವಾಸಿಸುತ್ತಿರುವ 10,000ದಷ್ಟು ಮಂದಿಗೆ ಮಾತ್ರ ಭಾಗವಹಿಸಲು ಅವಕಾಶ ಕೊಡಲಾಗಿದೆ.

‘‘ಈ ಬಾರಿಯ ಹಜ್ ಯಾತ್ರೆಯಲ್ಲಿ ಭದ್ರತೆಗೆ ಸಂಬಂಧಿಸಿದ ಕಳವಳಗಳಿಲ್ಲ. ಸಾಂಕ್ರಾಮಿಕದ ಅಪಾಯದಿಂದ ಜನರನ್ನು ರಕ್ಷಿಸುವುದಕ್ಕಾಗಿ ಸಮಾವೇಶದ ಗಾತ್ರವನ್ನು ಕಡಿಮೆ ಮಾಡಲಾಗಿದೆ’’ ಎಂದು ಸೌದಿ ಅರೇಬಿಯದ ಸಾರ್ವಜನಿಕ ಸುರಕ್ಷತೆ ಇಲಾಖೆಯ ನಿರ್ದೇಶಕ ಖಾಲಿದ್ ಬಿನ್ ಖರಾರ್ ಅಲ್ ಹರ್ಬಿ ಹೇಳಿದರು.

ಮಕ್ಕಾ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯಲಿರುವ ಸರಣಿ ಧಾರ್ಮಿಕ ವಿಧಿವಿಧಾನಗಳ ವೇಳೆ ಯಾತ್ರಿಕರು ಮುಖಗವಸುಗಳನ್ನು ಧರಿಸುವುದು ಮತ್ತು ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ.

ಸೋಂಕು ತಡೆಯುವ ಕ್ರಮಗಳ ಅನುಷ್ಠಾನ

ಹಜ್ ಯಾತ್ರೆಯಲ್ಲಿ ಭಾಗವಹಿಸಲು ಅವಕಾಶ ಪಡೆದವರು ದೇಹದ ಉಷ್ಣತೆ ತಪಾಸಣೆಗೆ ಒಳಗಾಗಬೇಕಾಗುತ್ತದೆ ಹಾಗೂ ಅವರನ್ನು ದಿಗ್ಬಂಧನದಲ್ಲಿ ಇಡಲಾಗುತ್ತದೆ.

ಯಾತ್ರಿಕರ ಚೀಲಗಳಿಗೆ ಆರೋಗ್ಯ ಕಾರ್ಯಕರ್ತರು ಸೋಂಕು ನಿರೋಧಕಗಳನ್ನು ಚಿಮುಕಿಸುವುದನ್ನು ಸರಕಾರಿ ಮಾಧ್ಯಮವು ತೋರಿಸಿದೆ. ಕೆಲವು ಯಾತ್ರಿಗಳಿಗೆ ಅವರು ಇರುವ ಸ್ಥಳಗಳನ್ನು ಪತ್ತೆಹಚ್ಚುವುದಕ್ಕಾಗಿ ಇಲೆಕ್ಟ್ರಾನಿಕ್ ಕೈಪಟ್ಟಿಗಳನ್ನು ನೀಡಲಾಗಿದೆ ಎಂದು ವರದಿಯಾಗಿದೆ.

ಈ ಬಾರಿ ಯಾತ್ರಿಕರು ಪವಿತ್ರ ಕಾಬಾವನ್ನು ಸ್ಪರ್ಶಿಸುವುದನ್ನು ನಿಷೇಧಿಸಲಾಗಿದೆ. ಅದನ್ನು ಖಾತರಿಪಡಿಸುವುದಕ್ಕಾಗಿ ಕಾಬಾದ ಸುತ್ತ ತಡೆಬೇಲಿಗಳನ್ನು ನಿರ್ಮಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News