‘ಸುರಕ್ಷಿತ ಅಂತರ’ದೊಂದಿಗೆ ಸರಳ ಹಜ್

Update: 2020-08-01 18:33 GMT

ಮಿನಾ (ಸೌದಿ ಅರೇಬಿಯ), ಆ. 1: ಹಜ್ ಯಾತ್ರೆಯ ಅಂತಿಮ ಘಟ್ಟವಾಗಿರುವ ‘ಸೈತಾನನಿಗೆ ಕಲ್ಲೆಸೆಯುವ’ ವಿಧಿವಿಧಾನವನ್ನು ಯಾತ್ರಿಗಳು ಶುಕ್ರವಾರ ನೆರವೇರಿಸಿದರು. ಕೊರೋನ ವೈರಸ್ ಮುಕ್ತಗೊಳಿಸುವುದಕ್ಕಾಗಿ ರಾಸಾಯನಿಕದಲ್ಲಿ ಅದ್ದಿದ ಕಲ್ಲುಗಳನ್ನು ಯಾತ್ರಿಗಳಿಗೆ ವಿತರಿಸಲಾಗಿತ್ತು.

ಹಿಂದಿನ ವರ್ಷಗಳಲ್ಲಿ, ಈ ಮಹತ್ವದ ವಿಧಿವಿಧಾನದ ವೇಳೆ ಭಾರೀ ನೂಕುನುಗ್ಗಲು ಉಂಟಾಗುತ್ತಿತ್ತು. ಹಲವು ಸಂದರ್ಭಗಳಲ್ಲಿ ನೂಕುನುಗ್ಗಲಿನಿಂದ ಉಂಟಾದ ಕಾಲ್ತುಳಿತದಿಂದಾಗಿ ನೂರಾರು ಮಂದಿ ಮೃತಪಟ್ಟಿರುವ ನಿದರ್ಶನಗಳಿವೆ. ಆದರೆ, ಈ ಬಾರಿ ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಕೇವಲ 10,000 ಸೌದಿ ನಿವಾಸಿಗಳಿಗೆ ಹಜ್ ಯಾತ್ರೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಅವರು ಮುಖಗವಸು ಹಾಕಿ ಸುರಕ್ಷಿತ ಅಂತರ ಕಾಯ್ದುಕೊಂಡು ಸಾವಕಾಶವಾಗಿ ‘ಸೈತಾನನಿಗೆ ಕಲ್ಲೆಸೆಯುವ’ ವಿಧಿವಿಧಾನವನ್ನು ಪೂರೈಸಿದ್ದಾರೆ.

ಕಳೆದ ವರ್ಷದ ಹಜ್ ಯಾತ್ರೆಯಲ್ಲಿ ಜಗತ್ತಿನಾದ್ಯಂತದ ಸುಮಾರು 25 ಲಕ್ಷ ಮುಸ್ಲಿಮರು ಭಾಗವಹಿಸಿದ್ದರು.

ಯಾತ್ರಿಕರು ಸುಡುವ ಬಿಸಿಲಲ್ಲಿ ಸೈತಾನನಿಗೆ ಕಲ್ಲೆಸೆಯಲು ಪವಿತ್ರ ನಗರ ಮಕ್ಕಾ ಸಮೀಪದ ಮಿನಾ ಕಣಿವೆಗೆ ತೆರಳಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಭದ್ರತಾ ಸಿಬ್ಬಂದಿ ಎಲ್ಲ ವಿಧಿವಿಧಾನಗಳು ಸಾಂಗವಾಗಿ ನೆರವೇರಲು ಅವಕಾಶ ಮಾಡಿಕೊಟ್ಟರು. ಬಿಳಿಯ ವಸ್ತ್ರಧಾರಿ ಯಾತ್ರಿಕರು ಗುರುತು ಮಾಡಲಾದ ದಾರಿಯಲ್ಲಿ ಸಾಗಿ ಸೈತಾನನನ್ನು ಸಂಕೇತಿಸುವ ಗೋಡೆಗೆ ತಲಾ ಏಳು ಕಲ್ಲುಗಳನ್ನು ಎಸೆದರು.

ಕ್ರಿಮಿನಾಶಕದಲ್ಲಿ ಅದ್ದಿದ ಕಲ್ಲುಗಳು

ಹಿಂದಿನ ವರ್ಷಗಳಲ್ಲಿ ಯಾತ್ರಿಕರು ಸ್ವತಃ ತಾವೇ ಕಲ್ಲುಗಳನ್ನು ಸಂಗ್ರಹಿಸಿ ತರಬೇಕಾಗಿತ್ತು. ಆದರೆ, ಈ ಬಾರಿ ನೋವೆಲ್-ಕೊರೋನ ವೈರಸ್‌ನ ಭೀತಿಯಿಂದಾಗಿ ಕ್ರಿಮಿನಾಶಕದಲ್ಲಿ ಅದ್ದಿದ ಕಲ್ಲುಗಳನ್ನು ಒಳಗೊಂಡ ಚೀಲಗಳನ್ನು ಹಜ್ ಅಧಿಕಾರಿಗಳು ಯಾತ್ರಿಕರಿಗೆ ನೀಡಿದ್ದರು.

ಕಲ್ಲೆಸೆಯುವ ವಿಧಿ ವಿಧಾನದ ಬಳಿಕ, ಯಾತ್ರಿಕರು ಮಕ್ಕಾದ ಪ್ರಧಾನ ಮಸೀದಿಗೆ ಮರಳಿ ಅಂತಿಮ ‘ತವಾಫ್’ ನೆರವೇರಿಸಿದರು.

ಎಲ್ಲರಿಗೂ ಕೊರೋನ ಪರೀಕ್ಷೆ

ಹಜ್ ಯಾತ್ರೆಯಲ್ಲಿ ಭಾಗವಹಿಸಿದ ಎಲ್ಲ ಯಾತ್ರಿಕರನ್ನು ಕೊರೋನ ವೈರಸ್ ಪರೀಕ್ಷೆಗೆ ಒಳಪಡಿಸಲಾಗಿತ್ತು ಹಾಗೂ ಆಗಾಗ ಅವರ ದೇಹದ ಉಷ್ಣತೆಯನ್ನು ತಪಾಸಿಸಲಾಗುತ್ತಿತ್ತು. ಹಜ್ ಬಳಿಕ ಅವರು ಕ್ವಾರಂಟೈನ್‌ಗೆ ಒಳಪಡಬೇಕಾಗಿದೆ ಎಂದು ಹಜ್ ಅಧಿಕಾರಿಗಳು ಹೇಳಿದ್ದಾರೆ.

ಹಜ್ ಯಾತ್ರಿಗಳಿಗಾಗಿ 6 ಆಸ್ಪತ್ರೆಗಳು, 51 ಕ್ಲಿನಿಕ್ ಶಿಬಿರಗಳು ಮತ್ತು 200 ಆ್ಯಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿತ್ತು ಎಂದು ಸೌದಿ ಅರೇಬಿಯದ ಆರೋಗ್ಯ ಸಚಿವಾಲಯದ ವಕ್ತಾರ ಮುಹಮ್ಮದ್ ಅಲ್ ಆಬಿದ್ ಅಲ್ ಅಲಿ ತಿಳಿಸಿದರು.

ಸುಮಾರು 8,000 ವೈದ್ಯಕೀಯ ಸಿಬ್ಬಂದಿಯನ್ನು ಯಾತ್ರಿಕರ ಆರೈಕೆಗಾಗಿ ನೇಮಿಸಲಾಗಿತ್ತು.

ಈ ಬಾರಿ ಉಚಿತ ಹಜ್

ಸಾಮಾನ್ಯವಾಗಿ ಹಜ್ ಯಾತ್ರೆ ಕೈಗೊಳ್ಳಲು ಲಕ್ಷಾಂತರ ರೂಪಾಯಿ ಬೇಕಾಗುತ್ತದೆ. ಪವಿತ್ರ ಯಾತ್ರೆ ಕೈಗೊಳ್ಳುವುದಕ್ಕಾಗಿ ಜನರು ವರ್ಷಗಳ ಕಾಲ ಹಣವನ್ನು ಉಳಿಸುತ್ತಾರೆ. ಅದೂ ಅಲ್ಲದೆ, ಉದ್ದನೆಯ ವೇಟಿಂಗ್ ಲಿಸ್ಟ್‌ನಲ್ಲಿ ಹೆಸರು ಬಿದ್ದ ಬಳಿಕ, ಹಜ್ ಯಾತ್ರೆಯಲ್ಲಿ ಭಾಗವಹಿಸುವ ಅವಕಾಶಕ್ಕಾಗಿ ಕಾತರತೆಯಿಂದ ಕಾಯಬೇಕಾಗಿತ್ತು.

ಆದರೆ, ಈ ಬಾರಿ ಎಲ್ಲ ಯಾತ್ರಿಕರ ಖರ್ಚುವೆಚ್ಚಗಳನ್ನು ಸೌದಿ ಅರೇಬಿಯ ಸರಕಾರವೇ ಭರಿಸಿದೆ. ಅವರಿಗೆ ಊಟ, ಹೊಟೇಲ್ ವಾಸ್ತವ್ಯ ಮತ್ತು ಆರೋಗ್ಯ ಸೇವೆಗಳನ್ನು ಉಚಿತವಾಗಿ ಪೂರೈಸಿದೆ ಎಂದು ಯಾತ್ರಿಕರು ಹೇಳಿದ್ದಾರೆ.

ಈ ಬಾರಿ ಅಧಿಕಾರಿಗಳಿಂದ ದುಪ್ಪಟ್ಟು ಶ್ರಮ: ಸೌದಿ ದೊರೆ

ಈ ಬಾರಿಯ ಹಜ್ ಯಾತ್ರೆಯ ಗಾತ್ರ ಕಿರಿದಾಗಿದ್ದರೂ, ಕೊರೋನ ವೈರಸ್ ಹಿನ್ನೆಲೆಯಲ್ಲಿ ಅದನ್ನು ಸಂಘಟಿಸುವುದಕ್ಕಾಗಿ ಸೌದಿ ಅರೇಬಿಯದ ಅಧಿಕಾರಿಗಳು ‘ದುಪ್ಪಟ್ಟು ಶ್ರಮ’ ಪಟ್ಟಿದ್ದಾರೆ ಎಂದು ದೇಶದ ದೊರೆ ಸಲ್ಮಾನ್ ಶುಕ್ರವಾರ ಹೇಳಿದ್ದಾರೆ.

ಪಿತ್ತಕೋಶದ ಊತಕ್ಕಾಗಿ ಶಸ್ತ್ರಚಿಕಿತ್ಸೆಗೊಳಗಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ. ಅವರ ಭಾಷಣವನ್ನು ದೇಶದ ಮಾಧ್ಯಮ ಸಚಿವ ಮಜೀದ್ ಅಲ್ ಖಸಬಿ ಸರಕಾರಿ ಟಿವಿಯಲ್ಲಿ ಓದಿ ಹೇಳಿದರು.

‘‘ಈ ಬಾರಿಯ ಹಜ್ ಯಾತ್ರೆಯನ್ನು ಅತ್ಯಂತ ಕನಿಷ್ಠ ಸಂಖ್ಯೆಯ ಜನರಿಗೆ ಸೀಮಿತಗೊಳಿಸಲಾಗಿದೆ. ಆದರೂ, ವಿವಿಧ ದೇಶಗಳ ಜನರಿಗೆ ಇದರಲ್ಲಿ ಅವಕಾಶ ನೀಡಲಾಗಿದೆ. ಕಠಿಣ ಪರಿಸ್ಥಿತಿಗಳ ಹೊರತಾಗಿಯೂ ವಿದಿ ವಿಧಾನಗಳನ್ನು ಸಾಂಗವಾಗಿ ಪೂರ್ಣಗೊಳಿಸಲು ಶ್ರಮಿಸಲಾಗಿದೆ’’ ಎಂದು ದೊರೆ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News