ದುಬೈ: ಮಗನ ನೆನಪಲ್ಲಿ 61 ಮಂದಿ ಭಾರತೀಯರು ವಾಪಸಾಗಲು ವಿಮಾನ ಟಿಕೆಟ್ ನೀಡಿದ ಕೇರಳದ ವ್ಯಕ್ತಿ

Update: 2020-08-02 08:06 GMT
Photo: gulfnews.com

ತಿರುವನಂತಪುರ: ದುಬೈನಲ್ಲಿರುವ ಕೇರಳ ಮೂಲದ ವ್ಯಕ್ತಿ ಟಿ.ಎನ್.ಕೃಷ್ಣಕುಮಾರ್ ಎಂಬವರು ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 61 ಮಂದಿ ಕೇರಳಿಗರು ತಮ್ಮ ತಾಯ್ನಾಡಿಗೆ ಮರಳಲು ವಿಮಾನ ಟಿಕೆಟ್ ನೀಡಿದ್ದಾರೆ. ಕಳೆದ ವರ್ಷ ಅಪಘಾತವೊಂದರಲ್ಲಿ ಮೃತಪಟ್ಟ ಮಗನ ನೆನಪಿನಲ್ಲಿ ಈ ಸೇವೆ ಮಾಡಿದ್ದಾರೆ.

“ಸಾಕಷ್ಟು ದುಃಖ ತುಂಬಿಕೊಂಡ ಜನ ಇದ್ದಾರೆ. ಈ ಪೈಕಿ ಬಹುತೇಕ ಮಂದಿ ಉದ್ಯೋಗ ಕಳೆದುಕೊಂಡು ಮನೆಗೆ ಹಿಂದಿರುಗಲು ಹಣ ಇಲ್ಲದ ಶ್ರಮಿಕರು. ಇಂಥವರು ತಮ್ಮ ಮನೆಗಳಿಗೆ ತೆರಳಿ ಪ್ರೀತಿಪಾತ್ರರ ಜತೆ ಸೇರಲಿ ಎಂಬ ಆಶಯದಿಂದ ಈ ಸೇವೆಗೆ ಮುಂದಾಗಿದ್ದೇನೆ” ಎಂದು ಕೃಷ್ಣಕುಮಾರ್ ಹೇಳಿದರು. ಅವರು 32 ವರ್ಷಗಳಿಂದ ದುಬೈ ವಾಸಿ.

ತಿರುವನಂತಪುರ ಇಂಜಿನಿಯರಿಂಗ್ ಕಾಲೇಜಿನಲ್ಲಿ 1988ರಲ್ಲಿ ಪದವಿ ಪಡೆದ ಅವರು, ಆಲ್ ಕೇರಳ ಕಾಲೇಜ್ ಅಲ್ಯುಮ್ನಿ ಫ್ರಂಟ್‍ನ ಸಕ್ರಿಯ ಸದಸ್ಯರು. ಕೇರಳ ಮೂಲದ ಕಾಲೇಜುಗಳಲ್ಲಿ ವಿಜ್ಞಾನ ಹಾಗೂ ಕಲಾ ಪದವಿ ಪಡೆದ 85 ಹಳೆವಿದ್ಯಾರ್ಥಿಗಳು ಯುಎಇನಲ್ಲಿ ಈ ಸಂಘಟನೆ ಹುಟ್ಟುಹಾಕಿದ್ದಾರೆ.
53 ವರ್ಷ ವಯಸ್ಸಿನ ಕೃಷ್ಣಕುಮಾರ್ ಈ ಸ್ವಯಂಸೇವಾ ಪ್ರಯತ್ನದ ಕೇಂದ್ರ ಬಿಂದು. ಇಫ್ತಾರ್ ವೇಳೆ ಶ್ರಮಿಕರ ಶಿಬಿರಗಳಿಗೆ ಆಹಾರ ಕಿಟ್‍ಗಳ ವಿತರಣೆ, 2018ರ ಕೇರಳ ಪ್ರವಾಹದ ವೇಳೆ ಸ್ವಯಂಸೇವಕರನ್ನು ಕಳುಹಿಸಿದ್ದು, ಕೋವಿಡ್-19 ವಿರುದ್ಧದ ಹೋರಾಟದ ಅಂಗವಾಗಿ ಯುಎಇನಲ್ಲಿ ರೋಗಲಕ್ಷಣ ಇಲ್ಲದ ವ್ಯಕ್ತಿಗಳಿಗಾಗಿ ಕ್ವಾರಂಟೈನ್ ಕೇಂದ್ರಗಳನ್ನು ಆರಂಭಿಸಿದ್ದು, ಮತ್ತಿತರ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News