ಭಾರತ-ಯುಎಇ ಪ್ರಯಾಣ ಕಾರಿಡಾರ್ ಆ.31ರವರೆಗೆ ವಿಸ್ತರಣೆ: ಯುಎಇಗೆ ಭಾರತದ ರಾಯಭಾರಿ

Update: 2020-08-04 17:02 GMT

ಅಬುಧಾಬಿ (ಯುಎಇ), ಆ. 4: ಭಾರತ ಮತ್ತು ಯುಎಇ ನಡುವಿನ ತಾತ್ಕಾಲಿಕ ಪ್ರಯಾಣ ಕಾರಿಡಾರ್ (ಎರಡು ದೇಶಗಳ ನಡುವಿನ ವಿಮಾನಯಾನ) ಆಗಸ್ಟ್ 31ರವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಯುಎಇಗೆ ಭಾರತದ ರಾಯಭಾರಿಯಾಗಿರುವ ಪವನ್ ಕಪೂರ್ ಹೇಳಿದ್ದಾರೆ.

ಯುಎಇಗೆ ಬರುವ ಮತ್ತು ಯುಎಇಯಿಂದ ಹೊರಹೋಗುವ ಎಲ್ಲ ವಿಮಾನಗಳ ಟಿಕೆಟ್‌ಗಳು ಆಗಸ್ಟ್ 5ರಿಂದ ಖರೀದಿಗೆ ಲಭ್ಯವಿರುತ್ತವೆ ಎಂದು ಸೋಮವಾರ ‘ಖಲೀಜ್ ಟೈಮ್ಸ್’ಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.

‘‘ವಿಧಿವಿಧಾನಗಳನ್ನು ನಾವು ಸುಲಭಗೊಳಿಸುತ್ತಿದ್ದೇವೆ. ಈ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಯುಎಇ ಮತ್ತು ಭಾರತದ ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ಎರಡೂ ಮಾರ್ಗಗಳಿಗಾಗಿ ತಮ್ಮ ಪ್ರಯಾಣಿಕರನ್ನು ಆನ್‌ಲೈನ್ ಅಥವಾ ತಮ್ಮ ಏಜಂಟ್‌ಗಳ ಮೂಲಕ ಅಥವಾ ಟಿಕೆಟ್ ಮಾರಾಟದ ಕಚೇರಿಗಳ ಮೂಲಕ ನೋಂದಾಯಿಸಲು ಸಾಧ್ಯವಾಗುತ್ತದೆ’’ ಎಂದು ಅವರು ನುಡಿದರು.

ಭಾರತವು ತನ್ನ ವಾಣಿಜ್ಯ ವಿಮಾನ ಯಾನವನ್ನು ಆಗಸ್ಟ್ ಕೊನೆಯವರೆಗೆ ಸ್ಥಗಿತಗೊಳಿಸಿದೆ. ಆದರೂ, ಜುಲೈ 12ರಿಂದ 26ವರೆಗೆ ಎರಡು ವಾರಗಳ ಪ್ರಯಾಣ ಕಾರಿಡಾರನ್ನು ತೆರೆಯಲು ಭಾರತ ಮತ್ತು ಯುಎಇಗಳು ಒಪ್ಪಿಕೊಂಡಿವೆ. ಈಗ ಅದನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗುತ್ತಿದೆ.

ಎರಡು ವಾರಗಳ ಅವಧಿಯಲ್ಲಿ ಭಾರತದಿಂದ ಯುಎಇಗೆ ಸುಮಾರು 23,000ದಿಂದ 25,000 ಭಾರತೀಯರು ಪ್ರಯಾಣಿಸಿದ್ದಾರೆ ಹಾಗೂ ಇದಕ್ಕಿಂತಲೂ ಹೆಚ್ಚಿನ ಮಂದಿ ಪ್ರಯಾಣಕ್ಕಾಗಿ ಯುಎಇ ಸರಕಾರದ ಅನುಮೋದನೆಯನ್ನು ಎದುರು ನೋಡುತ್ತಿದ್ದಾರೆ ಎಂದು ಕಪೂರ್ ತಿಳಿಸಿದರು.

ಒಂದು ತಿಂಗಳ ಪ್ರಯಾಣ ಅವಧಿಯಲ್ಲಿ 600ರಿಂದ 700 ವಿಮಾನಗಳು ಹಾರಾಟ ನಡೆಸಲಿವೆ ಎಂದು ಅವರು ನುಡಿದರು. ‘‘ಆದರೆ, ಇದೇನೂ ಅಂತಿಮವಲ್ಲ. ಬೇಡಿಕೆ ಹೆಚ್ಚಿದೆ ಎಂದು ನಮಗೆ ಅನಿಸಿದರೆ, ವಿಮಾನಗಳ ಸಂಖ್ಯೆಯನ್ನು ನಾವು ಹೆಚ್ಚಿಸಬಹುದಾಗಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News